ಮಂಗಳೂರು: ರಾಜ್ಯ ಬಜೆಟ್ನಲ್ಲಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಮರು ಪ್ರಾರಂಭಿಸುವ ಮತ್ತು ವಿದ್ಯಾರ್ಥಿಗಳಿಗಾಗಿ ಇಂದಿರಾ ಕ್ಯಾಂಟೀನ್ ಆರಂಭಿಸುವ ಕುರಿತು ಸರ್ಕಾರ ಘೋಷಣೆ ಮಾಡಿರುವುದು ವಿದ್ಯಾರ್ಥಿ ಸಂಘಟನೆಗಳ ನಡುವೆ ಪರ-ವಿರೋಧದ ಅಲೆ ಎಬ್ಬಿಸಿದೆ. ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿ ಮಂಗಳೂರು ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜು ಕ್ಯಾಂಪಸ್ನಲ್ಲಿ ಎನ್ಎಸ್ಯುಐ (NSUI) ಕಾರ್ಯಕರ್ತರು ಭರ್ಜರಿ ಸಂಭ್ರಮಾಚರಣೆ ನಡೆಸಿದರು. ಈ ಘೋಷಣೆಗಳು ವಿದ್ಯಾರ್ಥಿ ಪ್ರಜಾಪ್ರಭುತ್ವಕ್ಕೆ ಶಕ್ತಿ ನೀಡಲಿವೆ ಎಂದು ಸಂಘಟನೆ ಹರ್ಷ ವ್ಯಕ್ತಪಡಿಸಿದೆ.
ಆದರೆ, ಎನ್ಎಸ್ಯುಐ ಸಂಭ್ರಮಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಎಬಿವಿಪಿ (ABVP) ಕಾರ್ಯಕರ್ತರು ಕಾಲೇಜಿನ ಪ್ರವೇಶ ದ್ವಾರದ ಬಳಿ ಬೃಹತ್ ಪ್ರತಿಭಟನೆ ನಡೆಸಿದರು. ಸಂಭ್ರಮಾಚರಣೆಯ ನೆಪದಲ್ಲಿ ಕಾಲೇಜು ಆವರಣಕ್ಕೆ ನುಗ್ಗಿ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಪಡಿಸಲಾಗಿದೆ ಎಂದು ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿಭಟನಾಕಾರರು ಎನ್ಎಸ್ಯುಐ ಸಂಘಟನೆಯ ವಿರುದ್ಧ ಘೋಷಣೆಗಳನ್ನು ಕೂಗಿದ್ದಲ್ಲದೆ, ಕಾಲೇಜು ಆವರಣದೊಳಗೆ ಸಂಭ್ರಮಾಚರಣೆಗೆ ಅನುಮತಿ ನೀಡಿದ ಪ್ರಾಂಶುಪಾಲರ ವಿರುದ್ಧವೂ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಕ್ಯಾಂಪಸ್ನಲ್ಲಿ ಎರಡು ಪ್ರಬಲ ವಿದ್ಯಾರ್ಥಿ ಸಂಘಟನೆಗಳ ನಡುವಿನ ಈ ಸಂಘರ್ಷದಿಂದಾಗಿ ಶೈಕ್ಷಣಿಕ ವಾತಾವರಣದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನೆಯಿಂದಾಗಿ ಕಾಲೇಜಿನ ಪ್ರವೇಶ ದ್ವಾರದಲ್ಲಿ ನೂರಾರು ವಿದ್ಯಾರ್ಥಿಗಳು ಜಮಾಯಿಸಿದ್ದು, ಪೋಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಸರ್ಕಾರದ ಬಜೆಟ್ ಘೋಷಣೆಯು ಶೈಕ್ಷಣಿಕ ವಲಯದಲ್ಲಿ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡುತ್ತಿದೆಯೇ ಎಂಬ ಚರ್ಚೆಗಳು ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









