ಮಂಗಳೂರು: ಆರ್ಯ ಸಮಾಜ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಭೂ ವ್ಯವಹಾರದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ ಭೀಕರ ಘಟನೆ ನಡೆದಿದೆ. ಮಲ್ಲಿಕಟ್ಟೆ ನಿವಾಸಿ ಮೋಹನ್ ದಾಸ್ ಶೆಟ್ಟಿ (56) ಎಂಬುವವರೇ ಕೊಲೆ ಯತ್ನಕ್ಕೊಳಗಾದವರು. ಈ ಸಂಬಂಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಕಾರು ಚಾಲಕ ಮಹಮ್ಮದ್ ಶರೀಫ್ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತ ಮೋಹನ್ ದಾಸ್ ಶೆಟ್ಟಿ ಹಾಗೂ ಆರೋಪಿ ಶರೀಫ್ ಮತ್ತು ಆತನ ತಂದೆ ಮಹಮ್ಮದ್ ಇಕ್ಸಾಲ್ ನಡುವೆ ಸುರತ್ಕಲ್ನ ಕಾನ ಹಾಗೂ ವಾಮಂಜೂರಿನಲ್ಲಿ ನಡೆದ ಭೂ ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ಕೋಟಿ ರೂಪಾಯಿಗಳ ಹಣಕಾಸಿನ ವಿವಾದವಿತ್ತು. ಈ ಹಣದ ಹೂಡಿಕೆಯಲ್ಲಿ ತನಗೆ ಮೋಸವಾಗಿದೆ ಎಂದು ಆರೋಪಿ ಶರೀಫ್ ಸಿಟ್ಟಿನಲ್ಲಿದ್ದ ಎನ್ನಲಾಗಿದೆ. ಮಂಗಳವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಆರ್ಯ ಸಮಾಜ ರಸ್ತೆಯ ಬಳಿ ಇವರ ಮಧ್ಯೆ ಇದೇ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ಆರೋಪಿಯು ಮೋಹನ್ ದಾಸ್ ಅವರ ಮೊಬೈಲ್ ಕಸಿದುಕೊಂಡಿದ್ದ ಎಂದು ತಿಳಿದುಬಂದಿದೆ.
ಮಾತುಕತೆಯ ನಂತರ ಮೋಹನ್ ದಾಸ್ ಶೆಟ್ಟಿ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಅಲ್ಲಿಂದ ಹೊರಟಿದ್ದಾರೆ. ಈ ವೇಳೆ ಅವರನ್ನು ಹಿಂಬಾಲಿಸಿದ ಆರೋಪಿ ಶರೀಫ್, ತನ್ನ ಇನೋವಾ ಕ್ರಿಸ್ಟಾ ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಲವಾಗಿ ಢಿಕ್ಕಿ ಹೊಡೆದಿದ್ದಾನೆ. ಉದ್ದೇಶಪೂರ್ವಕವಾಗಿ ಪ್ರಾಣಾಪಾಯ ಉಂಟುಮಾಡುವ ನಿಟ್ಟಿನಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









