ಮಂಗಳೂರು : ಬೋಳೂರಿನಲ್ಲಿ ನಡೆದ ಜಾರಂದಾಯ ದೈವಸ್ಥಾನದ ಬಂಟ ದೈವದ ನರ್ತನ ಸೇವೆಯ ಕುರಿತು ಡಾ. ರತಿ ಅವರು ಮಾಡಿದ್ದ ಆರೋಪಗಳನ್ನು ದೈವನರ್ತಕ ಸೂರಜ್ ಚಿಪ್ಪಾರು ಮತ್ತು ಪಂಬದ ಸಮುದಾಯದ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಕಳೆದ ಮಾರ್ಚ್ 13ರಂದು ನಡೆದ ಸುದ್ದಿಗೋಷ್ಠಿಯಲ್ಲಿ ರತಿಯವರು, ಕ್ರೈಸ್ತ ಮಹಿಳೆಗೆ ಹುಟ್ಟಿದ ಯುವಕನಿಂದ ದೈವ ಸೇವೆ ಮಾಡಿಸುವ ಮೂಲಕ ಸಂಪ್ರದಾಯಕ್ಕೆ ಚ್ಯುತಿ ತರಲಾಗಿದೆ ಎಂದು ಆರೋಪಿಸಿದ್ದರು. ಆದರೆ, ಈ ಆರೋಪಕ್ಕೆ ಪ್ರತಿಯಾಗಿ ಸುಶಾಂತ್ ಬಂಗೇರ ಅವರ ಜಾತಿ ಪ್ರಮಾಣಪತ್ರವನ್ನು ಬಿಡುಗಡೆ ಮಾಡಲಾಗಿದ್ದು, ಅವರು ಹಿಂದೂ ಪಂಬದ ಸಮುದಾಯಕ್ಕೆ ಸೇರಿದವರು ಎಂಬ ದಾಖಲೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಸಮುದಾಯದ ಮುಖಂಡರು, ಪಂಬದ ಸಮುದಾಯದ ಗಣೇಶ್ ಪದವಿನಂಗಡಿ ಅವರು ಕ್ರೈಸ್ತ ಮಹಿಳೆಯನ್ನು ಮದುವೆಯಾಗಿರುವುದು ನಿಜವಾದರೂ, ಆಕೆ ಮದುವೆಯಾದ ಕ್ಷಣದಿಂದಲೇ ಹಿಂದೂ ಸಂಪ್ರದಾಯ ಮತ್ತು ಪಂಬದ ಜಾತಿಯ ನೀತಿ ನಿಯಮಗಳನ್ನು ಪಾಲಿಸುತ್ತಾ ಬಂದಿದ್ದಾರೆ ಎಂದರು. ತನ್ನ ಮೂಲ ಧರ್ಮವನ್ನು ಬಿಟ್ಟು ಮತ್ತೊಂದು ಧರ್ಮದ ಆಚಾರ-ವಿಚಾರಗಳನ್ನು ಅಳವಡಿಸಿಕೊಂಡಾಗ ಅವರು ಆ ಸಮುದಾಯದವರೇ ಆಗುತ್ತಾರೆ. ಗಣೇಶ್ ಮತ್ತು ಅವರ ಪತ್ನಿಯ ಮಗನಾಗಿ ಜನಿಸಿದ ಸುಶಾಂತ್, ಕಾನೂನುಬದ್ಧವಾಗಿ ಹಿಂದೂ ಪಂಬದ ಎಂಬ ದಾಖಲೆಗಳನ್ನು ಹೊಂದಿದ್ದಾರೆ. ಹೀಗಿರುವಾಗ ಹೆಣ್ಣನ್ನು ದೂಷಿಸುವುದು ಮತ್ತು ಯುವಕನ ಜಾತಿಯ ಬಗ್ಗೆ ಸಂಶಯ ವ್ಯಕ್ತಪಡಿಸುವುದು ಅನ್ಯಾಯ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಶಾಂತ್ ಬಂಗೇರ, ತನ್ನನ್ನು ಸುಳ್ಳು ಆರೋಪದ ಮೂಲಕ ಕ್ರೈಸ್ತ ಎಂದು ಬಿಂಬಿಸಿ ಅವಮಾನ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಂಶೋಧಕಿ ರತಿ ಅವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಈ ರೀತಿ ಮಾಡುತ್ತಿದ್ದು, ಇದರಿಂದಾಗಿ ತನಗೆ ದೈವನರ್ತನ ಸೇವೆ ಮಾಡಲು ಮುಜುಗರ ಮತ್ತು ಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ನೋವು ತೋಡಿಕೊಂಡರು. ಈ ಕೂಡಲೇ ರತಿಯವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಅವರು ಒತ್ತಾಯಿಸಿದರು. 31 ವರ್ಷಗಳ ಅನುಭವವಿರುವ ಚಿಪ್ಪಾರು ಗಣೇಶ್ ಪಂಬದ ಅವರು ಮಾತನಾಡಿ, ಬೋಳೂರಿನಲ್ಲಿ ದೈವದ ಅಪ್ಪಣೆಯಂತೆಯೇ ಸೇವೆ ನಡೆದಿದ್ದು, ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









