ಮಂಗಳೂರು : ಮಂಜಲ್ಪಾದೆಯಲ್ಲಿ ಇತ್ತೀಚೆಗೆ ಸೃಷ್ಟಿಯಾಗಿದ್ದ ‘ಭೂತ’ದ ಭೀತಿಯ ಹಿಂದಿನ ಅಸಲಿ ಸತ್ಯ ಈಗ ಬಯಲಾಗಿದ್ದು, ಇಡೀ ಘಟನೆ ಒಂದು ರೋಚಕ ತಿರುವು ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಭಯಾನಕ ಸುದ್ದಿಯ ಹಿಂದೆ ಯಾವುದೇ ದೆವ್ವ-ಪಿಶಾಚಿಗಳಿರಲಿಲ್ಲ, ಬದಲಾಗಿ ಗೆಳೆಯನೊಬ್ಬ ತನ್ನ ಸ್ನೇಹಿತನ ತಡರಾತ್ರಿ ಮನೆಗೆ ಬರುವ ಹವ್ಯಾಸವನ್ನು ಬಿಡಿಸಲು ಹೂಡಿದ ಉಪಾಯವೊಂದು ಇಡೀ ನಗರವನ್ನೇ ನಡುಗಿಸಿತ್ತು.
ಪಂಪ್ವೆಲ್ ಸಮೀಪದ ಮಂಜಲ್ಪಾದೆ ಪರಿಸರದಲ್ಲಿ ರಾತ್ರಿ ವೇಳೆ ಬಿಳಿ ಬಟ್ಟೆ ಧರಿಸಿದ ವಿಚಿತ್ರ ಆಕೃತಿಯೊಂದು ಓಡಾಡುತ್ತಿದೆ ಎಂಬ ಆಡಿಯೋ ಕ್ಲಿಪ್ ತುಳು ಭಾಷೆಯಲ್ಲಿ ವೈರಲ್ ಆಗಿತ್ತು. ಪಾಂಡೇಶ್ವರದ ಫೋರಂ ಮಾಲ್ನಿಂದ ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಈ ಆಕೃತಿ ಕಾಣಿಸಿಕೊಂಡು, ಆತ ಭಯದಿಂದ ಸ್ಕೂಟರ್ನಿಂದ ಬಿದ್ದಿದ್ದಾನೆ ಹಾಗೂ ಆತನ ಬೆನ್ನಿನ ಮೇಲೆ ದೆವ್ವ ಹೊಡೆದ ಗುರುತುಗಳಿವೆ ಎಂಬ ಸುಳ್ಳು ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ಅಸ್ಪಷ್ಟ ಫೋಟೋಗಳು ಮತ್ತು ಈ ಆಡಿಯೋ ಜನರಲ್ಲಿ ತೀವ್ರ ಆತಂಕ ಮೂಡಿಸಿತ್ತು.
ಈ ರಾದ್ಧಾಂತದ ಅಸಲಿ ಕಥೆಯೆಂದರೆ, ಈ ಯೋಜನೆಯ ಸೂತ್ರಧಾರ ತನ್ನ ಗೆಳೆಯನ ಒಳ್ಳೆಯದಕ್ಕಾಗಿಯೇ ಈ ಸ್ಕೆಚ್ ಹಾಕಿದ್ದ. ಆತನ ಸ್ನೇಹಿತ ಪ್ರತಿದಿನ ತಡರಾತ್ರಿವರೆಗೂ ಹೊರಗೆ ಸುತ್ತಾಡಿ ತಡವಾಗಿ ಮನೆಗೆ ಬರುವ ಅಭ್ಯಾಸ ಹೊಂದಿದ್ದ. ಎಷ್ಟೇ ಬುದ್ಧಿ ಹೇಳಿದರೂ ಕೇಳದ ಗೆಳೆಯನನ್ನು ಹೆದರಿಸಿ ಬೇಗ ಮನೆಗೆ ಬರುವಂತೆ ಮಾಡಲು, ಈ ‘ಕಿಲಾಡಿ’ ಗೆಳೆಯ ಧ್ವನಿ ಬದಲಿಸಿ ಎಚ್ಚರಿಕೆಯ ಆಡಿಯೋ ರೆಕಾರ್ಡ್ ಮಾಡಿ ಕಳುಹಿಸಿದ್ದ. ಆದರೆ ಆ ಆಡಿಯೋ ಗೆಳೆಯನ ಕೈಯಿಂದ ಬೇರೆಯವರ ಮೊಬೈಲ್ಗೆ ತಲುಪಿ, ನೋಡನೋಡುತ್ತಿದ್ದಂತೆ ಇಡೀ ಮಂಗಳೂರನ್ನೇ ಬೆಚ್ಚಿಬೀಳಿಸುವ ಹಾರರ್ ಕಥೆಯಾಗಿ ಮಾರ್ಪಟ್ಟಿತ್ತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









