ಮಂಗಳೂರು : ಕರ್ನಾಟಕದ 31 ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಲುವಾಗಿ ಎಐಸಿಸಿ ಕೈಗೊಂಡಿರುವ ‘ಸಂಘಟನ್ ಸೃಜನ್ ಅಭಿಯಾನ್’ ಪ್ರಕ್ರಿಯೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 29ರಿಂದ ಆಗಸ್ಟ್ 12ರವರೆಗೆ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೋಝಿಕ್ಕೋಡ್ ಶಾಸಕ ಜಯಂತ್ ನೇತೃತ್ವದ ಎಐಸಿಸಿ ವೀಕ್ಷಕರ ತಂಡ ಹಾಗೂ ಕೆಪಿಸಿಸಿಯ ನಾಲ್ವರು ಸದಸ್ಯರನ್ನೊಳಗೊಂಡ ವಿಶೇಷ ಸಮಿತಿಯು ಜುಲೈ 28ರಂದು ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವ ಮೂಲಕ ಈ ಬೃಹತ್ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಮೊದಲ ದಿನ ಬೆಳಿಗ್ಗೆ ಪಕ್ಷದ ಪ್ರತಿನಿಧಿಗಳು ಹಾಗೂ ಸದಸ್ಯರ ಸಭೆ ನಡೆಯಲಿದ್ದು, ಮಧ್ಯಾಹ್ನದ ನಂತರ ಹಾಲಿ-ಮಾಜಿ ಶಾಸಕರು ಮತ್ತು ಪ್ರಮುಖ ಪದಾಧಿಕಾರಿಗಳೊಂದಿಗೆ ಸಮಿತಿಯು ಸಮಾಲೋಚನೆ ನಡೆಸಲಿದೆ.
ಜುಲೈ 29ರಿಂದ ಆಗಸ್ಟ್ 11ರವರೆಗಿನ ಅವಧಿಯಲ್ಲಿ ಈ ವೀಕ್ಷಕರ ತಂಡವು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಡುವ 17 ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಗೆ ಖುದ್ದಾಗಿ ತೆರಳಿ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯಗಳನ್ನು ಕ್ರೋಢೀಕರಿಸಲಿದೆ. ಬಳಿಕ ಆಗಸ್ಟ್ 12ರಂದು ಜಿಲ್ಲಾ ಕಚೇರಿಯಲ್ಲಿ ಪಕ್ಷದ ಹಿತೈಷಿಗಳು ಹಾಗೂ ಸಮಾನಮನಸ್ಕರ ಅಹವಾಲುಗಳನ್ನು ಸ್ವೀಕರಿಸಲಾಗುತ್ತದೆ. ತಳಮಟ್ಟದ ಸಮಾಲೋಚನೆಯ ನಂತರ ಸಲ್ಲಿಕೆಯಾಗುವ ಅರ್ಜಿಗಳು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳ ಆಧಾರದ ಮೇಲೆ 3ರಿಂದ 6 ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್ಗೆ ಕಳುಹಿಸಿಕೊಡಲಾಗುವುದು. ಸಂಪೂರ್ಣ ಪ್ರಕ್ರಿಯೆಯು ಒಂದು ತಿಂಗಳಲ್ಲಿ ಮುಕ್ತಾಯಗೊಂಡು ದಕ್ಷಿಣ ಕನ್ನಡ ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕವಾಗುವ ನಿರೀಕ್ಷೆಯಿದೆ.
ಸತತ ಐದು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರಿಗೆ ಮತ್ತೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಪಕ್ಷದ ಯಾವುದೇ ಸಕ್ರಿಯ ಕಾರ್ಯಕರ್ತರೂ ಸ್ಪರ್ಧೆಗೆ ಇಳಿಯಬಹುದಾಗಿದ್ದು, ಕೇವಲ ಸಲ್ಲಿಕೆಯಾದ ಅರ್ಜಿಗಳನ್ನಷ್ಟೇ ಪರಿಗಣಿಸದೆ ತಳಮಟ್ಟದ ಕಾರ್ಯಕರ್ತರಿಂದ ಬರುವ ಒಲವು ಹಾಗೂ ಅಭಿಪ್ರಾಯಗಳ ಆಧಾರದ ಮೇಲೆಯೂ ಸೂಕ್ತ ನಾಯಕರ ಹೆಸರನ್ನು ಸಮಿತಿಯು ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಲು ಅವಕಾಶ ಕಲ್ಪಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










