ಉಡುಪಿ: ರಾಜಕೀಯ ಅಖಾಡದಲ್ಲಿ ಮಾಜಿ ಶಾಸಕ ಕೆ. ರಘುಪತಿ ಭಟ್ ಮತ್ತು ಪ್ರಸ್ತುತ ಶಾಸಕ ಯಶ್ಪಾಲ್ ಸುವರ್ಣ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ಬಡನಿಡಿಯೂರಿನ ಕಡಲ ತೀರದಲ್ಲಿ ತಾವು ನಿರ್ಮಿಸಲು ಉದ್ದೇಶಿಸಿರುವ ರೆಸಾರ್ಟ್ ಯೋಜನೆಗೆ ಶಾಸಕ ಯಶ್ಪಾಲ್ ಸುವರ್ಣ ಅವರು ವೈಯಕ್ತಿಕ ದ್ವೇಷದ ಕಾರಣದಿಂದ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ರಘುಪತಿ ಭಟ್ ಗಂಭೀರವಾಗಿ ಆರೋಪಿಸಿದ್ದಾರೆ. ಹೋಟೆಲ್ ಉದ್ಯಮದ ಮೂಲಕ ಪ್ರವಾಸೋದ್ಯಮ ಬೆಳೆಸುವ ಉದ್ದೇಶದಿಂದ 1.60 ಎಕರೆ ಜಾಗದಲ್ಲಿ ರೆಸಾರ್ಟ್ ಮಾಡಲು ಮುಂದಾಗಿದ್ದರೂ, ಕಳೆದ 24 ತಿಂಗಳಿಂದ ಸಿಂಗಲ್ ಲೇಔಟ್ ಅನುಮತಿ ನೀಡದೆ ಸತಾಯಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿದ್ದರೂ ಸಹ, ಜಿಲ್ಲಾಡಳಿತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರವು ಶಾಸಕರ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿವೆ ಎಂದು ಭಟ್ ದೂರಿದ್ದಾರೆ. ಫೆಬ್ರವರಿ 20ರಂದೇ ಅನುಮತಿ ನೀಡುವಂತೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬಂದಿದ್ದರೂ, ಒಂದು ತಿಂಗಳಿನಿಂದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಾಧಿಕಾರದ ಅಧಿಕಾರಿಗಳು ರಾಜಕೀಯ ‘ರೌಡಿಸಂ’ಗೆ ಹೆದರಿ ಸುಮ್ಮನಿದ್ದಾರೆ ಎಂದು ಗುಡುಗಿರುವ ಅವರು, ತಮ್ಮ ಉದ್ಯಮಕ್ಕೆ ತೊಂದರೆ ನೀಡುತ್ತಿರುವ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ, ಒಂದು ವೇಳೆ ನಿಂತರೂ ಅವರನ್ನು ಸೋಲಿಸುವ ತಾಕತ್ತು ನನಗಿದೆ ಎಂದು ಸವಾಲು ಹಾಕಿದ್ದಾರೆ.
ತಮಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಲು ಮಾರ್ಚ್ 23ರಂದು ಬೆಳಗ್ಗೆ 9:30ರಿಂದ ಸಂಜೆ 6 ಗಂಟೆಯವರೆಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಧರಣಿ ನಡೆಸುವುದಾಗಿ ರಘುಪತಿ ಭಟ್ ಘೋಷಿಸಿದ್ದಾರೆ. ನ್ಯಾಯ ಸಿಗುವವರೆಗೂ ಈ ಸಾತ್ವಿಕ ಹೋರಾಟ ಮುಂದುವರಿಯಲಿದ್ದು, ಪ್ರಾಧಿಕಾರವು ತಕ್ಷಣವೇ ಅನುಮತಿ ಪತ್ರ ನೀಡಬೇಕು ಅಥವಾ ಸ್ಪಷ್ಟವಾದ ಹಿಂಬರಹ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಹಿಂಬರಹ ನೀಡಿದಲ್ಲಿ ಧರಣಿ ಕೈಬಿಟ್ಟು ಕಾನೂನಾತ್ಮಕವಾಗಿ ಹೋರಾಟ ಮುಂದುವರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









