ಮಂಜೇಶ್ವರ : ಮಂಗಳೂರಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರ ವೀಡಿಯೊಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಹರಡುವ ರೀತಿಯಲ್ಲಿ ಪ್ರಚೋದನಕಾರಿ ಕಾಮೆಂಟ್ ಹಾಕಿದ್ದ ಆರೋಪಿಯನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಂಜೇಶ್ವರ ನಿವಾಸಿ ಗಣೇಶ್ ಪ್ರಸಾದ್ (41) ಎಂದು ಗುರುತಿಸಲಾಗಿದೆ. ಈತ ಫೇಸ್ಬುಕ್ನಲ್ಲಿ ಸಾರ್ವಜನಿಕ ಶಾಂತಿ ಕದಡುವಂತಹ ಹೇಳಿಕೆ ನೀಡಿದ್ದಕ್ಕಾಗಿ ಕಾನೂನು ಕ್ರಮ ಎದುರಿಸುತ್ತಿದ್ದಾನೆ.
ಘಟನೆಯ ಹಿನ್ನೆಲೆಯೆಂದರೆ, 2026ರ ಜನವರಿಯಲ್ಲಿ ಮಂಗಳೂರಿನ ಇಂಡಿಯಾನ ಕನ್ವೆನ್ಷನ್ ಸೆಂಟರ್ನಲ್ಲಿ ಕಿರಾಅತ್ (ಕುರಾನ್ ಪಠಣ) ಸ್ಪರ್ಧೆಯು ನಡೆದಿತ್ತು. ಈ ಕಾರ್ಯಕ್ರಮದ ವೀಡಿಯೊವನ್ನು ಸ್ಥಳೀಯ ದಿನಪತ್ರಿಕೆಯೊಂದು ತನ್ನ ಅಧಿಕೃತ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿತ್ತು. ಈ ವೀಡಿಯೊದ ಕೆಳಗೆ ಆರೋಪಿ ಗಣೇಶ್ ಪ್ರಸಾದ್ ತನ್ನ ವೈಯಕ್ತಿಕ ಖಾತೆಯಿಂದ, “ಮಕ್ಕಳ ತಲೆಯನ್ನು ಬ್ರೈನ್ ವಾಶ್ ಮಾಡಿ ನಾಳೆ ದೇಶಕ್ಕೆ ಬಾಂಬ್ ಇಡೋಕೆ ಕಳಿಸೋದು ಅಷ್ಟೇ” ಎಂಬ ವಿವಾದಾತ್ಮಕ ಹಾಗೂ ಪ್ರಚೋದನಕಾರಿ ಕಾಮೆಂಟ್ ಮಾಡಿದ್ದ ಎನ್ನಲಾಗಿದೆ.
ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್ಎಎಸ್ ಕಲಂ 196 ಹಾಗೂ ಐಟಿ ಕಾಯ್ದೆ 66ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮಾರ್ಚ್ 27ರಂದು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮಾಜದಲ್ಲಿ ಅಶಾಂತಿ ಮೂಡಿಸುವ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಅಪರಾಧ, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









