ಬೆಳ್ತಂಗಡಿ: ಯುವ ಉದ್ಯಮಿ ಸುದೀಪ್ ರೈ (36) ಅವರು ವಿಷ ಸೇವಿಸಿ ಮೃತಪಟ್ಟ ಪ್ರಕರಣಕ್ಕೆ ಈಗ ಹೊಸ ತಿರುವು ಲಭಿಸಿದೆ. ನೆಲ್ಯಾಡಿ ನಿವಾಸಿಯಾದ ಸುದೀಪ್ ರೈ ಅವರು ಕಳೆದ ಫೆಬ್ರವರಿ 17ರಂದು ಕಾರ್ಕಳದ ಸೌಮ್ಯ ಶೆಟ್ಟಿ ಎಂಬವರನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ಕೇವಲ ಒಂದು ತಿಂಗಳಲ್ಲೇ ಈ ದುರಂತ ಸಂಭವಿಸಿದ್ದು, ಮೃತರ ತಂದೆ ಬಿ. ದಾಮೋದರ ನೆಲ್ಯಾಡಿ ಅವರು ಮಗನ ಸಾವಿನ ಬಗ್ಗೆ ಹಲವು ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಮೃತ ಸುದೀಪ್ ರೈ ಅವರು ಬೆಳ್ತಂಗಡಿಯಲ್ಲಿ ‘ಎಸ್ಆರ್ ಎನ್ ಗ್ರೂಪ್’ ಹೆಸರಿನಲ್ಲಿ ಎಲೆಕ್ಟ್ರಾನಿಕ್ ಮತ್ತು ಸೋಲಾರ್ ಉದ್ಯಮ ನಡೆಸುತ್ತಿದ್ದರು. ಮಾರ್ಚ್ 17ರಂದು ಅವರು ತಿಂಡಿಯ ಜೊತೆಗೆ ವಿಷ ಸೇವಿಸಿದ್ದರು ಎನ್ನಲಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಾರ್ಚ್ 29ರಂದು ಮೃತಪಟ್ಟಿದ್ದರು. ಮಗನ ಸಾವಿನ ಹಿಂದೆ ಪತ್ನಿ ಸೌಮ್ಯ ಶೆಟ್ಟಿ ನೀಡುತ್ತಿದ್ದ ಮಾನಸಿಕ ಕಿರುಕುಳ ಅಥವಾ ಆತ್ಮಹತ್ಯೆಗೆ ನೀಡಿದ ಪ್ರಚೋದನೆ ಕಾರಣವಾಗಿರಬಹುದು ಅಥವಾ ಆಕೆಯೇ ತಿಂಡಿಯಲ್ಲಿ ವಿಷ ಪದಾರ್ಥ ಬೆರೆಸಿ ನೀಡಿರುವ ಸಾಧ್ಯತೆ ಇದೆ ಎಂದು ತಂದೆ ದಾಮೋದರ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಸಾವು ಕೇವಲ ಆತ್ಮಹತ್ಯೆಯಲ್ಲ, ಇದರ ಹಿಂದೆ ವ್ಯವಸ್ಥಿತ ಸಂಚು ಇರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಗೊಂದಲ ವ್ಯಕ್ತಪಡಿಸಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಸುದೀಪ್ ಇಂತಹ ನಿರ್ಧಾರ ಕೈಗೊಳ್ಳಲು ಪತ್ನಿಯ ನಡವಳಿಕೆಯೇ ಕಾರಣವೇ ಎಂಬ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಪ್ರಕರಣದ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ಮಗನ ಸಾವಿಗೆ ನ್ಯಾಯ ಒದಗಿಸಿಕೊಡಬೇಕೆಂದು ಬಿ. ದಾಮೋದರ ಅವರು ಪೊಲೀಸ್ ಇಲಾಖೆ ಹಾಗೂ ಸರ್ಕಾರದ ಮೊರೆ ಹೋಗಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









