ಬೆಳ್ತಂಗಡಿ : ಉದ್ಯಮಿ ಸುದೀಪ್ ರೈ ಅವರ ನಿಗೂಢ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಲಭಿಸಿದ್ದು, ಅವರ ಪತ್ನಿ ಸೌಮ್ಯ ಶೆಟ್ಟಿ (28) ಅವರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಪುತ್ತೂರು ನೆಲ್ಯಾಡಿಯವರಾದ ಸುದೀಪ್ ರೈ ಮತ್ತು ಕಾರ್ಕಳದ ನಿವಾಸಿಯಾಗಿರುವ ಪುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿ ಉದ್ಯೋಗಿ ಸೌಮ್ಯ ಶೆಟ್ಟಿ ಕಳೆದ ಫೆಬ್ರವರಿ 17ರಂದು ನೋಂದಾಯಿತ ವಿವಾಹವಾಗಿದ್ದರು. ಆದರೆ, ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೇವಲ ಒಂದು ತಿಂಗಳಲ್ಲೇ, ಅಂದರೆ ಮಾರ್ಚ್ 17ರಂದು ಸುದೀಪ್ ರೈ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 30ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ತಮ್ಮ ಮಗನ ಸಾವಿನ ಹಿಂದೆ ಅನುಮಾನಗಳಿವೆ ಎಂದು ಸುದೀಪ್ ಅವರ ತಂದೆ ದಾಮೋದರ ರೈ ಅವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮದುವೆಯಾದ ಅಲ್ಪ ಅವಧಿಯಲ್ಲೇ ಮಗ ಇಂತಹ ನಿರ್ಧಾರ ಕೈಗೊಳ್ಳಲು ಸೊಸೆಯ ಕಿರುಕುಳ ಅಥವಾ ಇತರ ಕಾರಣಗಳಿರಬಹುದು ಎಂಬ ಸಂಶಯವನ್ನು ಅವರು ವ್ಯಕ್ತಪಡಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಸೌಮ್ಯ ಶೆಟ್ಟಿ ಅವರ ಪಾತ್ರವಿರುವ ಬಗ್ಗೆ ಪ್ರಾಥಮಿಕ ಸಾಕ್ಷ್ಯಗಳು ಲಭ್ಯವಾದ ಹಿನ್ನೆಲೆಯಲ್ಲಿ ಈ ಬಂಧನ ಪ್ರಕ್ರಿಯೆ ನಡೆದಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೃತರ ತಂದೆಯ ದೂರಿನನ್ವಯ ಪ್ರಕರಣ ದಾಖಲಿಸಿ ಕೂಲಂಕಷ ತನಿಖೆ ನಡೆಸಲಾಗಿದೆ ಎಂದಿದ್ದಾರೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ಸಿಕ್ಕ ಮಾಹಿತಿ ಮತ್ತು ಪುರಾವೆಗಳ ಆಧಾರದ ಮೇಲೆ ಸೌಮ್ಯ ಶೆಟ್ಟಿ ಅವರನ್ನು ಬಂಧಿಸಲಾಗಿದೆ. ಪ್ರಸ್ತುತ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತನಿಖೆಯ ಬಳಿಕವಷ್ಟೇ ಪೂರ್ಣ ಪ್ರಮಾಣದಲ್ಲಿ ತಿಳಿದುಬರಬೇಕಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









