ಮಂಗಳೂರು : ಮಂಗಳೂರಿನ ಕೊಡಿಯಾಲ್ಬೈಲ್ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಧವಳ ಕೋ-ಆಪರೇಟಿವ್ ಸೊಸೈಟಿಯು 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಈ ಅವಧಿಯಲ್ಲಿ ಸಂಸ್ಥೆಯು ಸುಮಾರು 200 ಕೋಟಿ ರೂಪಾಯಿಗಳ ಬೃಹತ್ ವಹಿವಾಟು ನಡೆಸಿದ್ದು, 50.95 ಲಕ್ಷ ರೂಪಾಯಿಗಳ ನಿವ್ವಳ ಲಾಭವನ್ನು ಗಳಿಸಿದೆ. 2022ರ ಜೂನ್ ತಿಂಗಳಿನಲ್ಲಿ ರಾಜ್ಯಮಟ್ಟದ ಉದ್ದೇಶದೊಂದಿಗೆ ಆರಂಭವಾದ ಈ ಸಂಸ್ಥೆಯು ಕೇವಲ ಮೂರು ವರ್ಷಗಳಲ್ಲಿ ಈ ಮಟ್ಟದ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸುದರ್ಶನ್ ಜೈನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಸ್ಥೆಯು ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯ ಕಳಸ ಮತ್ತು ಕಾರ್ಕಳ ತಾಲೂಕಿನ ಹೊಸ್ಮಾರುಗಳಲ್ಲಿ ತನ್ನ ಶಾಖೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಮಾರ್ಚ್ 31, 2026ರ ಅಂತ್ಯಕ್ಕೆ ಸಂಸ್ಥೆಯು 22.75 ಕೋಟಿ ರೂಪಾಯಿಗಳ ಠೇವಣಿಯನ್ನು ಹೊಂದಿದ್ದು, 20.80 ಕೋಟಿ ರೂಪಾಯಿಗಳಷ್ಟು ಮುಂಗಡ ಸಾಲದ ಸೌಲಭ್ಯವನ್ನು ಜನರಿಗೆ ನೀಡಿದೆ. ಕೇಂದ್ರ ಕಚೇರಿ ಮತ್ತು ಶಾಖೆಗಳಲ್ಲಿ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯ ಜೊತೆಗೆ ಚಿನ್ನಾಭರಣ ಭದ್ರತಾ ಸಾಲ, ಇ-ಸ್ಟಾಂಪ್ ಮಾರಾಟ ಹಾಗೂ ಕೃಷಿ ಉತ್ಪನ್ನಗಳ ಈಡಿನ ಮೇಲೆ ಸಾಲ ನೀಡುವ ಸೌಲಭ್ಯಗಳನ್ನು ಸಂಸ್ಥೆಯು ಅಳವಡಿಸಿಕೊಂಡಿದೆ.
ಆಡಳಿತ ಮಂಡಳಿಯ ಪ್ರಾಮಾಣಿಕ ನಿರ್ದೇಶಕರು, ಉತ್ತಮ ಸದಸ್ಯರು ಹಾಗೂ ಸಿಬ್ಬಂದಿಗಳ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಸಂಸ್ಥೆಯು ಪ್ರತಿ ವರ್ಷವೂ ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿಯನ್ನು ಕಾಯ್ದುಕೊಂಡಿದೆ. ಇನ್ನು ಠೇವಣಿದಾರರಿಗೆ ವಿಶೇಷ ಕೊಡುಗೆಯಾಗಿ ವಾರ್ಷಿಕ ಶೇ. 10ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇ. 10.5ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









