ಮಂಗಳೂರು : ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘವು 2025-26ನೇ ಆರ್ಥಿಕ ವರ್ಷದಲ್ಲಿ ರೂ. 1.09 ಕೋಟಿ ಲಾಭ ಗಳಿಸುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದೆ. ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಆಡಳಿತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್. ಜಗದೀಶ್ಚಂದ್ರ ಅಂಚನ್ ಈ ವಿಷಯವನ್ನು ಪ್ರಕಟಿಸಿದರು. ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಈ ಸಂಘವು ಈಗ 95 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ನೌಕರರ ಆರ್ಥಿಕ ಬಲವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಸಂಘದ 95 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಠೇವಣಿ ಸಂಗ್ರಹಣೆಯಲ್ಲಿ ಶತಕೋಟಿ ದಾಟಿದ ಸಾಧನೆ ಮಾಡಲಾಗಿದೆ. ಕಳೆದ ವರ್ಷ ರೂ. 94.33 ಕೋಟಿ ಇದ್ದ ಠೇವಣಿ ಮೊತ್ತವು ವರದಿ ವರ್ಷದಲ್ಲಿ ರೂ. 108.10 ಕೋಟಿಗೆ ಏರಿಕೆಯಾಗಿದೆ. ಕೇವಲ ಠೇವಣಿ ಮಾತ್ರವಲ್ಲದೆ, ಸಾಲ ಮುಂಗಡವೂ ಕೂಡಾ ರೂ. 82.91 ಕೋಟಿಯಿಂದ ರೂ. 91.91 ಕೋಟಿಗೆ ಏರಿದೆ. ಸಂಘದ ಒಟ್ಟು ವ್ಯವಹಾರವು ಕಳೆದ ಬಾರಿಯ ರೂ. 177.23 ಕೋಟಿಯಿಂದ ಇದೀಗ ರೂ. 200.01 ಕೋಟಿಗೆ ತಲುಪಿರುವುದು ಸಂಘದ ಸ್ಥಿರ ಬೆಳವಣಿಗೆಯನ್ನು ತೋರಿಸುತ್ತದೆ ಎಂದು ಅಂಚನ್ ವಿವರಿಸಿದರು.
ಸಂಘವು ಪ್ರಸ್ತುತ 1,140 ‘ಎ’ ತರಗತಿ ಸದಸ್ಯರನ್ನು ಹೊಂದಿದ್ದು, ರೂ. 29.12 ಲಕ್ಷ ಪಾಲು ಬಂಡವಾಳ ಹಾಗೂ ರೂ. 6.31 ಕೋಟಿ ವಿವಿಧ ನಿಧಿಗಳನ್ನು ಹೊಂದಿದೆ. ಮಂಗಳೂರಿನ ಕೊಡಿಯಾಲ್ಬೈಲ್ನಲ್ಲಿ ‘ಉನ್ನತಿ’ ಎಂಬ ಸ್ವಂತ ಆಡಳಿತ ಕಟ್ಟಡ ಹಾಗೂ ನಾಲ್ಕು ಶಾಖೆಗಳ ಮೂಲಕ ಸಂಘವು ಕಾರ್ಯಾಚರಿಸುತ್ತಿದೆ. ವಿಶೇಷವಾಗಿ ಎಸ್ಸಿಡಿಸಿಸಿ ಬ್ಯಾಂಕ್ ನೀಡುವ ಪ್ರತಿಷ್ಠಿತ ‘ಸಾಧನಾ ಪ್ರಶಸ್ತಿ’ಯನ್ನು ಸತತ 8 ಬಾರಿ ಪಡೆದಿರುವುದು ಸಂಘದ ಪಾರದರ್ಶಕ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಸಭೆಯಲ್ಲಿ ಸಂಘದ ಉಪಾಧ್ಯಕ್ಷರು, ನಿರ್ದೇಶಕರುಗಳು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









