ಮಂಗಳೂರು : ಮಂಗಳೂರಿನ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕು ಮತ್ತು ಖಾಸಗಿ ಆಸ್ಪತ್ರೆಗಳೊಂದಿಗಿನ ಒಪ್ಪಂದಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ‘ಉಸ್ತುವಾರಿ ಕಚೇರಿ ಚಲೋ’ ಪಾದಯಾತ್ರೆಯು ಸಂಘರ್ಷಕ್ಕೆ ಕಾರಣವಾಯಿತು. ನಗರದ ವೆನ್ಲಾಕ್ ಆಸ್ಪತ್ರೆಯ ಮುಂಭಾಗದಿಂದ ಆರಂಭಗೊಂಡ ಈ ಪ್ರತಿಭಟನಾ ಮೆರವಣಿಗೆಯನ್ನು ಹಿರಿಯ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ನೂರಾರು ಕಾರ್ಯಕರ್ತರನ್ನು ಪೊಲೀಸರು ದಾರಿಯಲ್ಲೇ ತಡೆದು ಬಂಧಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್, ರಾಜ್ಯದ ಕಾಂಗ್ರೆಸ್ ಸರ್ಕಾರವು ಆರೋಗ್ಯ ಇಲಾಖೆಯನ್ನು ಖಾಸಗಿ ಆಸ್ಪತ್ರೆಗಳ ಲಾಬಿಗೆ ಅಡವಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಪ್ರತ್ಯೇಕ ಸರ್ಕಾರಿ ವೈದ್ಯಕೀಯ ಕಾಲೇಜು, ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆ ಮತ್ತು ಜಯದೇವ ಹೃದ್ರೋಗ ಆಸ್ಪತ್ರೆಯ ಘಟಕಗಳನ್ನು ಸ್ಥಾಪಿಸಬೇಕೆಂಬ ದಶಕಗಳ ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. ಈ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷವಾದ ಬಿಜೆಪಿ ಎರಡೂ ಖಾಸಗಿ ಲಾಬಿಯ ಪರವಾಗಿಯೇ ಇವೆ ಎಂದು ಅವರು ಟೀಕಿಸಿದರು.
ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಜಿಲ್ಲೆಯಲ್ಲಿ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದ್ದರೂ, ಆರೋಗ್ಯ ಸಚಿವರು ಜನರ ಆರೋಗ್ಯದ ಹಕ್ಕನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು. ಹೋರಾಟವನ್ನು ಹತ್ತಿಕ್ಕಲು ಪೊಲೀಸರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಅವರು, ಜನರ ಆರೋಗ್ಯ ರಕ್ಷಣೆ ಸಾಧ್ಯವಾಗದಿದ್ದರೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಪಾದಯಾತ್ರೆಯು ನಗರದ ಪ್ರಮುಖ ಖಾಸಗಿ ಆಸ್ಪತ್ರೆಗಳ ಮುಂಭಾಗದಿಂದ ಸಾಗಿ ಉಸ್ತುವಾರಿ ಸಚಿವರ ಕಚೇರಿ ತಲುಪುವ ಮೊದಲೇ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಈ ವೇಳೆ ಪೊಲೀಸರು ಮತ್ತು ಹೋರಾಟಗಾರರ ನಡುವೆ ತಳ್ಳಾಟ-ನೂಕಾಟ ನಡೆಯಿತು. ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಡಿವೈಎಫ್ಐ ಪ್ರಮುಖ ನಾಯಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರನ್ನು ವಶಕ್ಕೆ ಪಡೆದರು. ಈ ಹೋರಾಟದಲ್ಲಿ ಕಾರ್ಮಿಕ, ಮಹಿಳಾ, ದಲಿತ ಮತ್ತು ವಿದ್ಯಾರ್ಥಿ ಸಂಘಟನೆಗಳ ಹಲವಾರು ಮುಖಂಡರು ಸಕ್ರಿಯವಾಗಿ ಭಾಗವಹಿಸಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









