ಮಂಗಳೂರು : ಹೊರವಲಯದ ಮೂಡಬಿದ್ರೆಯ ತೋಡಾರು ಪರಿಸರದಲ್ಲಿ ಮಾನವೀಯತೆ ಮೆರೆಯುವ ಅಪರೂಪದ ಘಟನೆಯೊಂದು ನಡೆದಿದೆ. ತೋಡಾರು ನಿವಾಸಿ ಮಹಿಳೆಯೊಬ್ಬರು ಮಂಗಳೂರಿನಿಂದ ತೋಡಾರಿಗೆ ‘ಫಾಲ್ಗುಣಿ’ ಹೆಸರಿನ ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ ಬಳಿಯಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಆಕಸ್ಮಿಕವಾಗಿ ಕಳೆದುಹೋಗಿತ್ತು. ಬಸ್ನಿಂದ ಇಳಿದ ಬಳಿಕ ನೆಕ್ಲೆಸ್ ಕಾಣೆಯಾಗಿರುವುದು ಗಮನಕ್ಕೆ ಬಂದು, ಎಲ್ಲಾ ಕಡೆ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಅಸಹಾಯಕರಾದ ಮಹಿಳೆಯ ಕುಟುಂಬದವರು ನೆಕ್ಲೆಸ್ ಕಳೆದುಹೋದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡು, ಯಾರಿಗಾದರೂ ಸಿಕ್ಕಲ್ಲಿ ದಯವಿಟ್ಟು ಹಿಂದಿರುಗಿಸುವಂತೆ ಮನವಿ ಮಾಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಈ ಸುದ್ದಿಯನ್ನು ಗಮನಿಸಿದ ಫಾಲ್ಗುಣಿ ಬಸ್ನ ಕಂಡಕ್ಟರ್ ಶಾಝಿಲ್ ಅವರು ತಕ್ಷಣ ಕಾರ್ಯಪ್ರವೃತ್ತರಾದರು. ಬಸ್ನೊಳಗೆ ಅತ್ಯಂತ ಜಾಗರೂಕತೆಯಿಂದ ಹುಡುಕಾಟ ನಡೆಸಿದಾಗ, ಅವರಿಗೆ ಮಹಿಳೆ ಕಳೆದುಕೊಂಡಿದ್ದ 20 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಪತ್ತೆಯಾಯಿತು. ತಕ್ಷಣವೇ ಅದರ ವಾರೀಸುದಾರರನ್ನು ಸಂಪರ್ಕಿಸಿದ ಶಾಝಿಲ್, ನೈಜ ಮಾಲೀಕರನ್ನೇ ಖಚಿತಪಡಿಸಿಕೊಂಡು ತೋಡಾರಿನಲ್ಲಿ ಅವರಿಗೆ ಬಂಗಾರವನ್ನು ಹಸ್ತಾಂತರಿಸಿದರು.
ಕಳೆದುಹೋದ ತಮ್ಮ ಬೆಲೆಬಾಳುವ ಒಡವೆ ಸುರಕ್ಷಿತವಾಗಿ ಕೈಸೇರಿದ್ದರಿಂದ ಮಹಿಳೆ ಮತ್ತು ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇಂದಿನ ಕಾಲದಲ್ಲಿ ಚಿನ್ನದಂತಹ ಅಮೂಲ್ಯ ವಸ್ತು ಸಿಕ್ಕರೂ ಅದನ್ನು ಆಸೆ ಪಡದೇ ಪ್ರಾಮಾಣಿಕವಾಗಿ ಹಿಂದಿರುಗಿಸಿದ ಕಂಡಕ್ಟರ್ ಶಾಝಿಲ್ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ತೋಡಾರಿನಲ್ಲಿ ಶಾಝಿಲ್ ಅವರಿಗೆ ಹೂಗುಚ್ಛ ನೀಡಿ ಗೌರವಿಸಿದ ವಾರೀಸುದಾರರು, ಅವರ ಈ ನಿಸ್ವಾರ್ಥ ಸೇವೆಗೆ ಅಭಿನಂದನೆ ಸಲ್ಲಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









