ಮಂಗಳೂರು : ನಗರದಲ್ಲಿ ನೀರಿನ ಅಭಾವವನ್ನು ತಡೆಗಟ್ಟಲು ಮಂಗಳೂರು ಮಹಾನಗರ ಪಾಲಿಕೆಯು ಮೇ 4 ರಿಂದ ಅನ್ವಯವಾಗುವಂತೆ ಪರ್ಯಾಯ ದಿನಗಳ ನೀರಿನ ಪೂರೈಕೆ ಕ್ರಮವನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಯೋಜನೆಯಂತೆ ಮಂಗಳೂರು ನಗರದ ಉತ್ತರ ಮತ್ತು ದಕ್ಷಿಣ ಭಾಗಗಳಿಗೆ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತದೆ. ಮೇ 4 ರಂದು ಬೆಂದೂರು, ಪಡೀಲ್ ಮತ್ತು ಶಕ್ತಿನಗರ ಪಂಪಿಂಗ್ ಸ್ಟೇಷನ್ಗಳ ವ್ಯಾಪ್ತಿಯ ಪ್ರದೇಶಗಳಾದ ಕೋರ್ಟ್ ವಾರ್ಡ್, ಕಾರ್ ಸ್ಟ್ರೀಟ್, ಕದ್ರಿ, ಅತ್ತಾವರ, ಜಪ್ಪಿನಮೊಗರು, ಬೊಂದೇಲ್ ಮತ್ತು ಕಾವೂರು ಸೇರಿದಂತೆ ಹಲವು ಭಾಗಗಳಿಗೆ ನೀರು ನೀಡಲಾಗುವುದು. ತುಂಬೆ-ಪಣಂಬೂರು ನೇರ ಮಾರ್ಗದ ಕಂಕನಾಡಿ ಮತ್ತು ಪಂಪ್ವೆಲ್ ಪ್ರದೇಶಗಳಿಗೂ ಅಂದು ನೀರು ಪೂರೈಕೆಯಾಗಲಿದೆ.
ಮುಂದಿನ ಹಂತವಾಗಿ ಮೇ 5 ರಂದು ಪಣಂಬೂರು ಪಂಪಿಂಗ್ ಸ್ಟೇಷನ್ ವ್ಯಾಪ್ತಿಯ ಸುರತ್ಕಲ್, ಎನ್ಐಟಿಕೆ, ಬೈಕಂಪಾಡಿ ಹಾಗೂ ಪಡೀಲ್ ಸ್ಟೇಷನ್ ವ್ಯಾಪ್ತಿಯ ಬಂದರ್, ಸ್ಟೇಟ್ ಬ್ಯಾಂಕ್, ಪಾಂಡೇಶ್ವರ ಮತ್ತು ಕಣ್ಣೂರು ಭಾಗಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. ಶಕ್ತಿನಗರ ಟ್ಯಾಂಕ್ ಮೂಲಕ ಕುಲಶೇಖರ್, ಮರೋಳಿ ಮತ್ತು ಕೊಟ್ಟಾರ ಚೌಕಿ ಪಂಪ್ ಹೌಸ್ ವ್ಯಾಪ್ತಿಯ ಪ್ರದೇಶಗಳಿಗೆ ಅಂದು ನೀರು ಲಭ್ಯವಿರಲಿದೆ. ಈ ಪರ್ಯಾಯ ದಿನದ ನೀರಿನ ಸರಬರಾಜು ಪ್ರಕ್ರಿಯೆಯು ಮುಂದಿನ ಆದೇಶದವರೆಗೆ ಮುಂದುವರಿಯಲಿದೆ ಎಂದು ಪಾಲಿಕೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ನೀರು ಉಳಿತಾಯ ಮಾಡುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಸ್ಥಳಗಳು ಮತ್ತು ವಾಹನ ಸರ್ವಿಸ್ ಸೆಂಟರ್ಗಳಿಗೆ ನೀಡಲಾಗಿದ್ದ ನೀರಿನ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗುತ್ತಿದೆ. ಸಾರ್ವಜನಿಕರು ನೀರನ್ನು ಅನಗತ್ಯವಾಗಿ ವ್ಯರ್ಥ ಮಾಡುವುದು ಕಂಡುಬಂದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆಯನ್ನು ನೀಡಲಾಗಿದೆ. ನಾಗರಿಕರು ನೀರಿನ ಸಮಸ್ಯೆಗಳಿಗಾಗಿ ಪಾಲಿಕೆಯ ಸಹಾಯವಾಣಿ ಸಂಖ್ಯೆಗಳು ಅಥವಾ ವಾಟ್ಸಾಪ್ ಸಂಖ್ಯೆ 9449007722 ಮೂಲಕ ಸಂಪರ್ಕಿಸಬಹುದು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









