ಮಂಗಳೂರು : ಸುಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ 2026-27ನೇ ಸಾಲಿನ ಆಡಳಿತ ಸಮಿತಿಗೆ ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ಈ ಕುರಿತು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಮಾಹಿತಿ ನೀಡಿದ ಸಮಿತಿಯ ನೂತನ ಕಾರ್ಯದರ್ಶಿ ರವಿಶಂಕರ್ ಮಿಜಾರ್ ಅವರು, ಕ್ಷೇತ್ರದ ಅಭಿವೃದ್ಧಿ ಮತ್ತು ಆಡಳಿತವನ್ನು ಸುಗಮವಾಗಿ ನಡೆಸಲು ಸಮಿತಿ ಸಂಪೂರ್ಣ ಸನ್ನದ್ಧವಾಗಿದೆ ಎಂದು ತಿಳಿಸಿದರು.
ಕ್ಷೇತ್ರದ ಆಡಳಿತಕ್ಕೆ ಸಂಬಂಧಿಸಿದಂತೆ ಈ ಹಿಂದೆ ಉಂಟಾಗಿದ್ದ ಕಾನೂನು ವಿವಾದಕ್ಕೆ ಈಗ ತೆರೆ ಬಿದ್ದಿದೆ. 2025ರ ಜೂನ್ 20ರಂದು ನಡೆದಿದ್ದ ಸಭೆಯು ಅಧ್ಯಕ್ಷರ ಅನುಮತಿ ಇಲ್ಲದೆ ಮತ್ತು ಬಹುಮತದ ಕೊರತೆಯಿಂದ ಕೂಡಿದ್ದರಿಂದ ಅದು ಅಸಂವಿಧಾನಿಕ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಸುದೀರ್ಘ ಕಾನೂನು ಹೋರಾಟದ ನಂತರ ಜಿಲ್ಲಾ ನ್ಯಾಯಾಲಯವು ಅಖಿಲ ಭಾರತ ಬಿಲ್ಲವರ ಯೂನಿಯನ್ ಪರವಾಗಿ ತೀರ್ಪು ನೀಡಿದ್ದು, ಹಿಂದಿನ ಅನಧಿಕೃತ ಸಭೆಯ ನಿರ್ಧಾರಗಳನ್ನು ರದ್ದುಗೊಳಿಸಿದೆ. ಇದು ಸತ್ಯ ಮತ್ತು ನ್ಯಾಯಕ್ಕೆ ಸಂದ ಜಯ ಎಂದು ಮಿಜಾರ್ ಅಭಿಪ್ರಾಯಪಟ್ಟಿದ್ದಾರೆ.
ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಸಂಘದ ಬೈಲಾ ನಿಯಮಗಳ ಅನುಸಾರ ನಡೆದಿದೆ. 2026ರ ಫೆಬ್ರವರಿ 16ರಂದು ನಾರಾಯಣ ಗುರು ಕಾಲೇಜಿನ ಸಭಾಂಗಣದಲ್ಲಿ ನಡೆದ ಯೂನಿಯನ್ನ ವಾರ್ಷಿಕ ಪ್ರತಿನಿಧಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ನಿಯಮಾನುಸಾರ 50 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು, ಅವರ ಪೈಕಿ ಒಂಬತ್ತು ಪ್ರಮುಖರನ್ನು ಕ್ಷೇತ್ರದ ಆಡಳಿತ ಮಂಡಳಿಗೆ ಸರ್ವಾನುಮತದಿಂದ ಚುನಾಯಿಸಲಾಗಿದೆ.
ಬಿಲ್ಲವ ಸಮಾಜದ ಹಿರಿಯರ ದೂರದೃಷ್ಟಿ ಮತ್ತು ಗುರುಗಳ ಆಶಯದಂತೆ ಅಖಿಲ ಭಾರತ ಬಿಲ್ಲವರ ಯೂನಿಯನ್ ಕಾರ್ಯನಿರ್ವಹಿಸುತ್ತಿದೆ. ಅದರ ಅಧಿಕೃತ ಬೈಲಾ ಪ್ರಕಾರವೇ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ಭಕ್ತಾದಿಗಳ ಸಹಕಾರದೊಂದಿಗೆ ದೇವಸ್ಥಾನದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಸಮರ್ಥವಾಗಿ ಮುನ್ನಡೆಸಲು ಪದಾಧಿಕಾರಿಗಳು ಬದ್ಧರಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಲಾಯಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ತುಳುನಾಡು, ಸುದ್ದಿಗಳು









