ಉಡುಪಿ : ಹೆಬ್ರಿ ತಾಲೂಕಿನಲ್ಲಿ ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಣ್ಣ ಜಗಳ ದ್ವೇಷಕ್ಕೆ ತಿರುಗಿ, ಮಾಲೀಕನ ಮೇಲೆ ಆ್ಯಸಿಡ್ ಸುರಿದು ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಕೇರಳ ಮೂಲದ ಆರೋಪಿ ರತೀಶ್ ಕೆ.ಟಿ. ಎಂಬಾತನಿಗೆ ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30,000 ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ದಂಡದ ಮೊತ್ತ ಪಾವತಿಸಲು ತಪ್ಪಿದಲ್ಲಿ ಶಿಕ್ಷೆಯ ಅವಧಿ ಮತ್ತಷ್ಟು ವಿಸ್ತರಣೆಯಾಗಲಿದೆ.
ಈ ಘಟನೆಯ ಹಿನ್ನೆಲೆಯು 2022ರ ಫೆಬ್ರವರಿ ತಿಂಗಳಿನದ್ದಾಗಿದೆ. ಕೇರಳದ ತ್ರಿಶೂರ್ ನಿವಾಸಿ ಸುಧೀರ್ ಪಿ.ಎ. ಅವರು ಹೆಬ್ರಿಯ ಚಾರ ಗ್ರಾಮದ ಅಜಿತ್ ಅಗಸ್ಟೀನ್ ಅವರ ತೋಟಕ್ಕೆ ಭೇಟಿ ನೀಡಿದ್ದಾಗ, ಅಲ್ಲಿ ಕೆಲಸ ಮಾಡುತ್ತಿದ್ದ ರತೀಶ್ಗೆ ರಬ್ಬರ್ ಟ್ಯಾಪಿಂಗ್ ಕೆಲಸವನ್ನು ಸರಿಯಾಗಿ ಮಾಡುವಂತೆ ಹಾಗೂ ಇತರರನ್ನು ನೋಡಿ ಕಲಿಯುವಂತೆ ಕಿವಿಮಾತು ಹೇಳಿದ್ದರು. ಈ ಸಣ್ಣ ಸಲಹೆಯು ರತೀಶ್ನ ಕೆರಳಿಸಿ ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿತ್ತು. ಮನಸ್ಸಿನಲ್ಲಿ ತೀವ್ರ ದ್ವೇಷ ಬೆಳೆಸಿಕೊಂಡಿದ್ದ ಆರೋಪಿಯು ಮಾರ್ಚ್ 2ರಂದು ಮಧ್ಯರಾತ್ರಿ ಸುಧೀರ್ ಅವರು ಮಲಗಿದ್ದ ಸಂದರ್ಭದಲ್ಲಿ ಅವರ ಮುಖ ಮತ್ತು ಎದೆಗೆ ಬಿಸಿ ಆ್ಯಸಿಡ್ ಸುರಿದು ಮಾರಣಾಂತಿಕ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದನು.
ಘಟನೆಯ ನಂತರ ತೀವ್ರವಾಗಿ ಗಾಯಗೊಂಡಿದ್ದ ಸುಧೀರ್ ಅವರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಸಾಕ್ಷ್ಯಾಧಾರಗಳೊಂದಿಗೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಯ ಮೇಲಿನ ಕೊಲೆ ಯತ್ನ ಹಾಗೂ ಆ್ಯಸಿಡ್ ದಾಳಿಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಶಿಕ್ಷೆಗೊಳಗಾದ ರತೀಶ್ ಹಿರಿಯಡ್ಕ ಜೈಲಿನಲ್ಲಿ ತನ್ನ ಕೃತ್ಯಕ್ಕೆ ಶಿಕ್ಷೆ ಅನುಭವಿಸುತ್ತಿದ್ದಾನೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









