ಮಂಗಳೂರು : ಹಾಸ್ಯ ಪ್ರಧಾನ ಮತ್ತು ದಾಖಲೆ ನಿರ್ಮಿಸಿದ ‘ಸು ಪ್ರಮ್ ಸೋ’ ಚಿತ್ರದ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆದ ನಟ ಹಾಗೂ ನಿರ್ದೇಶಕ ಜೆ.ಪಿ. ತುಮಿನಾಡ್ ಅವರು ಬುಧವಾರ, ಮೇ 6 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನ ಪಿಲಿಕುಲದಲ್ಲಿರುವ ಸೌಟ್ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಶ್ಮಿಕಾ ಅವರೊಂದಿಗೆ ಜೆ.ಪಿ. ತುಮಿನಾಡ್ ಅವರು ಹೊಸ ಬಾಳಿಗೆ ಹೆಜ್ಜೆ ಇಟ್ಟಿದ್ದಾರೆ. ಈ ವಿವಾಹ ಸಂಭ್ರಮದಲ್ಲಿ ನಿರೂಪಕ ನಿರಂಜನ್ ದೇಶಪಾಂಡೆ, ನಟಿ ಸಂಧ್ಯಾ ಅರಕೆರೆ ಮತ್ತು ನಿರ್ದೇಶಕ ಶ್ರೀನಿಧಿ ಸೇರಿದಂತೆ ಸಿನಿರಂಗದ ಹಲವು ಗಣ್ಯರು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದ್ದಾರೆ.
ರಂಗಭೂಮಿ ಹಿನ್ನೆಲೆಯ ಜೆ.ಪಿ. ತುಮಿನಾಡ್ ಅವರು ಮೊದಲ ಬಾರಿಗೆ ಕಥೆ ಬರೆದು ನಿರ್ದೇಶಿಸಿದ್ದ ‘ಸು ಪ್ರಮ್ ಸೋ’ ಚಿತ್ರವು 2025ರಲ್ಲಿ ತೆರೆಕಂಡು ದೊಡ್ಡ ಮಟ್ಟದ ಯಶಸ್ಸು ಸಾಧಿಸಿತ್ತು. 2025ರ ಜುಲೈ 25 ರಂದು ಬಿಡುಗಡೆಯಾದ ಈ ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ಮೆಚ್ಚುಗೆ ಪಡೆಯುವುದರ ಜೊತೆಗೆ ವಾಣಿಜ್ಯಕವಾಗಿಯೂ ಇತಿಹಾಸ ಸೃಷ್ಟಿಸಿತ್ತು. ಪರಭಾಷೆಗಳಿಗೂ ಡಬ್ ಆಗುವ ಮೂಲಕ ಸೌಂಡ್ ಮಾಡಿದ್ದ ಈ ಸಿನಿಮಾ, ಯಾವುದೇ ದೊಡ್ಡ ಸ್ಟಾರ್ಗಳಿಲ್ಲದಿದ್ದರೂ 125 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿತ್ತು.
ಈ ಚಿತ್ರವು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರಗಳ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಮತ್ತು ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯನ್ನು ಪಾತ್ರವಾಗಿತ್ತು. ಇಂತಹ ಯಶಸ್ವಿ ಚಿತ್ರವನ್ನು ನೀಡಿದ ನಿರ್ದೇಶಕ ಜೆ.ಪಿ. ತುಮಿನಾಡ್ ಅವರು ಈಗ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಮನರಂಜನೆ, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









