ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಸೇರಿದಂತೆ ಕರಾವಳಿ ಭಾಗಕ್ಕೆ ತಡೆರಹಿತ ಹಾಗೂ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ನಿರ್ಣಾಯಕವಾಗಿರುವ ‘ಕಡಂದಲೆ 400 ಕೆವಿ ವಿದ್ಯುತ್ ಉಪಕೇಂದ್ರ’ ಕಾಮಗಾರಿಯನ್ನು ಜುಲೈ 15ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಮೂಡುಬಿದಿರೆ ತಾಲೂಕಿನ ಕಡಂದಲೆ ಗ್ರಾಮದಲ್ಲಿ ಭೂ ವ್ಯಾಜ್ಯದ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಈ ಯೋಜನೆಯ ಅಡೆತಡೆಗಳನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರ ಸತತ ಪ್ರಯತ್ನದಿಂದ ನಿವಾರಿಸಲಾಗಿದೆ. ಬುಧವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ವ್ಯವಸ್ಥಾಪಕ ನಿರ್ದೇಶಕರು, ಮುಂದಿನ ಮುಂಗಾರಿನೊಳಗೆ ಯೋಜನೆಯನ್ನು ಮುಕ್ತಾಯಗೊಳಿಸಿ ವಿದ್ಯುತ್ ಪ್ರಸರಣ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಭರವಸೆ ನೀಡಿದ್ದಾರೆ.
ಈ 400 ಕೆವಿ ಉಪಕೇಂದ್ರವು ಕರಾವಳಿಯ ಪ್ರಮುಖ ಕೈಗಾರಿಕಾ ಹಬ್ಗಳಿಗೆ ಸಂಜೀವಿನಿಯಂತೆ ಕಾರ್ಯನಿರ್ವಹಿಸಲಿದ್ದು, ಮಳೆಗಾಲದಲ್ಲಿ ಎದುರಾಗುವ ಕಡಿಮೆ ವೋಲ್ಟೇಜ್ ಮತ್ತು ವೋಲ್ಟೇಜ್ ವ್ಯತ್ಯಯದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿದೆ. ಯಾವುದಾದರೂ ವಿದ್ಯುತ್ ಕೇಂದ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡರೆ, ಈ ಕೇಂದ್ರದ ಮೂಲಕ ಪರ್ಯಾಯವಾಗಿ ತಕ್ಷಣ ವಿದ್ಯುತ್ ಮರುಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ. ಕೈಗಾರಿಕಾ ಬೆಳವಣಿಗೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ಯೋಜನೆಯು ಮಂಗಳೂರು ಭಾಗದ ದೀರ್ಘಕಾಲೀನ ವಿದ್ಯುತ್ ಭದ್ರತೆಗೆ ಪೂರಕವಾಗಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವ ಉದ್ದೇಶದಿಂದ ಮೇ 6 ರಿಂದ ಮೇ 24 ರವರೆಗೆ ಚಾಲ್ತಿಯಲ್ಲಿರುವ ಯುಪಿಸಿಎಲ್-ಹೆಬ್ಬನಹಳ್ಳಿ ಪ್ರಸರಣ ಮಾರ್ಗದ ಮೇಲೆ ‘ಲೈನ್ ಕ್ಲಿಯರ್’ ಪಡೆಯಲು ಕೆಪಿಟಿಸಿಎಲ್ ನಿರ್ಧರಿಸಿದೆ. ಈ ಅವಧಿಯಲ್ಲಿ ಪರ್ಯಾಯ ಮಾರ್ಗಗಳ ಮೂಲಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದ್ದರೂ, ತಾಂತ್ರಿಕವಾಗಿ ಅನಿವಾರ್ಯವಾದಲ್ಲಿ ಮಾತ್ರ ಸೀಮಿತ ಅವಧಿಗೆ ಲೋಡ್ ಶೆಡ್ಡಿಂಗ್ ಮಾಡಬೇಕಾದ ಸಂದರ್ಭ ಬರಬಹುದು. ಆದ್ದರಿಂದ ಈ ಮಹತ್ವದ ಅಭಿವೃದ್ಧಿ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಗ್ರಾಹಕರು ಸಹಕಾರ ನೀಡಬೇಕು ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









