ಮಂಗಳೂರು : ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸುರಕ್ಷತಾ ದಳ (RPF) ಮತ್ತು ಅಪರಾಧ ಪತ್ತೆ ದಳ (CIB) ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಚಿನ್ನಾಭರಣದೊಂದಿಗೆ ಕುಖ್ಯಾತ ಕಳ್ಳನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಹೊಸದುರ್ಗ ನಿವಾಸಿ ಆಸಿಫ್ ಪಿ.ಎಚ್. (25) ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 93.5 ಗ್ರಾಂ ತೂಕದ, 13,06,662 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ‘ಆಪರೇಷನ್ ರೈಲ್ ಪ್ರಹರಿ’ ಅಡಿಯಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ತಪಾಸಣೆಗೊಳಪಡಿಸಿದಾಗ ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯು ತಾನು ಈ ಚಿನ್ನಾಭರಣಗಳನ್ನು ತೃಶೂರಿನ ಪಾವರಟ್ಟಿ ಎಂಬಲ್ಲಿನ ಮನೆಯೊಂದರಿಂದ ಕಳವು ಮಾಡಿರುವುದಾಗಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಪಾವರಟ್ಟಿ ಪೊಲೀಸ್ ಠಾಣೆಯಲ್ಲಿ ಕಳೆದ ಮೇ 6ರಂದು ಮನೆಯ ಬೀಗ ಮುರಿದು ಕಳ್ಳತನ ಮಾಡಿರುವ ಕುರಿತು ಪ್ರಕರಣ ದಾಖಲಾಗಿತ್ತು. ಆರೋಪಿಯ ಬ್ಯಾಗ್ನಲ್ಲಿ ನಾಲ್ಕು ಬಳೆಗಳು, ಮೂರು ನೆಕ್ಲೇಸ್, ಉಂಗುರಗಳು, ಚೈನ್, ಬ್ರೇಸ್ಲೆಟ್ ಮತ್ತು ಓಲೆಗಳು ಪತ್ತೆಯಾಗಿದ್ದು, ಇವೆಲ್ಲವೂ ತೃಶೂರಿನ ಕಳ್ಳತನ ಪ್ರಕರಣದ ಸ್ವತ್ತುಗಳೇ ಎಂದು ದೃಢಪಟ್ಟಿದೆ. ಬಳಿಕ ಆರೋಪಿ ಮತ್ತು ವಶಪಡಿಸಿಕೊಂಡ ಮಾಲನ್ನು ಕಾನೂನು ಪ್ರಕ್ರಿಯೆಗಾಗಿ ಪಾವರಟ್ಟಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ತನಿಖೆಯ ವೇಳೆ ಬಂಧಿತ ಆಸಿಫ್ ಒಬ್ಬ ಕುಖ್ಯಾತ ಹಳೇ ಅಪರಾಧಿ ಎಂಬ ಆಘಾತಕಾರಿ ವಿಷಯ ಬಯಲಾಗಿದೆ. ಈತನ ವಿರುದ್ಧ ಎರ್ನಾಕುಲಂನಿಂದ ಹಿಡಿದು ಕಾಸರಗೋಡಿನವರೆಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ 12ಕ್ಕೂ ಹೆಚ್ಚು ಕಳ್ಳತನ ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ. ಪಯ್ಯನ್ನೂರು, ಹೊಸದುರ್ಗ, ಪಾಲಕ್ಕಾಡ್, ನೀಲೇಶ್ವರ ಸೇರಿದಂತೆ ಹಲವು ಠಾಣೆಗಳಲ್ಲಿ ಈತ ಬೇಕಾಗಿದ್ದ ಆರೋಪಿಯಾಗಿದ್ದು, ಈತನ ವಿರುದ್ಧ ನ್ಯಾಯಾಲಯಗಳಿಂದ ಜಾಮೀನು ರಹಿತ ವಾರಂಟ್ಗಳು ಕೂಡ ಹೊರಡಿಸಲಾಗಿತ್ತು. ಇದೀಗ ಮಂಗಳೂರು ರೈಲ್ವೆ ಪೊಲೀಸರ ಸಮಯಪ್ರಜ್ಞೆಯಿಂದಾಗಿ ಈ ಅಂತರರಾಜ್ಯ ಕಳ್ಳನ ಆಟಕ್ಕೆ ಬ್ರೇಕ್ ಬಿದ್ದಂತಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









