ಮಂಗಳೂರು : ಕರ್ನಾಟಕ ಸರ್ಕಾರವು ಶಾಲಾ-ಕಾಲೇಜುಗಳಲ್ಲಿನ ಸಮವಸ್ತ್ರ ನೀತಿಗೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ತೀರ್ಮಾನ ಕೈಗೊಂಡಿದ್ದು, ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಪದ್ಧತಿಗನುಗುಣವಾದ ಸಂಕೇತಗಳನ್ನು ಧರಿಸಲು ಅಧಿಕೃತವಾಗಿ ಅವಕಾಶ ಮಾಡಿಕೊಟ್ಟಿದೆ. ಮೇ 13ರಂದು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಅಡಿಯಲ್ಲಿ ಹೊರಡಿಸಲಾದ ಹೊಸ ಆದೇಶದನ್ವಯ, ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ನಿಗದಿಪಡಿಸಿದ ಸಮವಸ್ತ್ರದ ಜೊತೆಗೆ ಜನಿವಾರ, ಶಿವದಾರ, ರುದ್ರಾಕ್ಷಿ, ಪೇಟ, ಟರ್ಬನ್ ಅಥವಾ ಹಿಜಾಬ್ ಧರಿಸಬಹುದಾಗಿದೆ. ಆದರೆ, ಈ ಸಾಂಪ್ರದಾಯಿಕ ಸಂಕೇತಗಳು ಸಮವಸ್ತ್ರಕ್ಕೆ ಪೂರಕವಾಗಿರಬೇಕೇ ಹೊರತು ಸಮವಸ್ತ್ರದ ಸ್ವರೂಪವನ್ನು ಬದಲಿಸುವಂತೆ ಇರಬಾರದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಡುಪಿಯಲ್ಲಿ ಆರಂಭವಾದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದವು ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಆ ಸಂದರ್ಭದಲ್ಲಿ 2022ರಲ್ಲಿ ಹೊರಡಿಸಲಾಗಿದ್ದ ಸಮವಸ್ತ್ರದ ಆದೇಶವು ಹಿಜಾಬ್ ಧರಿಸುವುದನ್ನು ಪರೋಕ್ಷವಾಗಿ ನಿರ್ಬಂಧಿಸಿತ್ತು. ಇದೀಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಆ ಹಳೆಯ ಆದೇಶವನ್ನು ಸಂಪೂರ್ಣವಾಗಿ ಹಿಂಪಡೆದಿದೆ. ಇತ್ತೀಚೆಗೆ ಬೆಂಗಳೂರಿನ ಕೋರಮಂಗಲದಲ್ಲಿ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಸಿದ ಘಟನೆ ನಡೆದ ಕೆಲವೇ ದಿನಗಳಲ್ಲಿ ಸರ್ಕಾರ ಈ ಮಹತ್ವದ ತಿದ್ದುಪಡಿ ತಂದಿರುವುದು ಗಮನಾರ್ಹವಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಇನ್ನು ಮುಂದೆ ಯಾವುದೇ ವಿದ್ಯಾರ್ಥಿಯು ಧಾರ್ಮಿಕ ಚಿಹ್ನೆಗಳನ್ನು ಧರಿಸಿದ್ದಾನೆ ಎಂಬ ಕಾರಣಕ್ಕೆ ತರಗತಿ ಅಥವಾ ಪರೀಕ್ಷಾ ಹಾಲ್ಗೆ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಎಚ್ಚರಿಸಿದ್ದಾರೆ. ಯಾವುದೇ ವಿದ್ಯಾರ್ಥಿಯನ್ನು ಧಾರ್ಮಿಕ ಚಿಹ್ನೆಗಳನ್ನು ಧರಿಸಲು ಅಥವಾ ತೆಗೆಯಲು ಒತ್ತಾಯಿಸುವಂತಿಲ್ಲ ಎಂಬುದು ಸರ್ಕಾರದ ನಿಲುವು ಎಂದು ಅವರು ಸ್ಪಷ್ಟಪಡಿಸಿದರು. ಈ ಆದೇಶದ ಮೂಲಕ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮವಸ್ತ್ರ ವಿವಾದಕ್ಕೆ ಸರ್ಕಾರವು ತೆರೆ ಎಳೆಯಲು ಪ್ರಯತ್ನಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸಂಕ್ಷಿಪ್ತ ಸುದ್ದಿಗಳು, ಸುದ್ದಿಗಳು









