ಮಂಗಳೂರು : ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸುವ ಪ್ರಕ್ರಿಯೆಗೆ ಕರಡು ರೂಪ ನೀಡಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಾಲೋಚನಾ ಸಭೆಯೊಂದನ್ನು ಆಯೋಜಿಸಬೇಕೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಿನಂತಿಸಿದೆ. ಈ ಸಂಬಂಧ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಬೆಂಗಳೂರಿನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ ಅಧಿಕೃತ ಮನವಿ ಪತ್ರವನ್ನು ಹಸ್ತಾಂತರಿಸಿದರು. ಕರಾವಳಿ ಬಾಂಧವರ ದಶಕಗಳ ಈ ಭಾಷಾ ಆಶಯವನ್ನು ಈಡೇರಿಸಲು ಮುಂದಿನ ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಕ್ರಮಗಳನ್ನು ಜರುಗಿಸುವ ನಿಟ್ಟಿನಲ್ಲಿ ಈ ಜಂಟಿ ಸಭೆ ಅತ್ಯಂತ ನಿರ್ಣಾಯಕವಾಗಿದೆ ಎಂದು ಅವರು ಸಿಎಂ ಗಮನ ಸೆಳೆದಿದ್ದಾರೆ.
ರಾಜ್ಯದಲ್ಲಿ ತುಳು ಭಾಷೆಗೆ ಅಧಿಕೃತ ಭಾಷೆಯ ಗೌರವ ನೀಡುವ ಸಾಧಕ-ಬಾಧಕಗಳ ಪರಿಶೀಲನೆಗಾಗಿ ಸರ್ಕಾರದ ಆದೇಶದಂತೆ ರಚಿಸಲಾಗಿದ್ದ ವಿಶೇಷ ಅಧ್ಯಯನ ಸಮಿತಿಯು ನೆರೆಯ ಆಂಧ್ರಪ್ರದೇಶ ರಾಜ್ಯಕ್ಕೆ ಭೇಟಿ ನೀಡಿ ಈಗಾಗಲೇ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಆಂಧ್ರಪ್ರದೇಶದಲ್ಲಿ ಉರ್ದು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಕಾನೂನುಬದ್ಧವಾಗಿ ಘೋಷಿಸಲು ಅಲ್ಲಿನ ಸರ್ಕಾರ ಅನುಸರಿಸಿದ ವಿಧಿವಿಧಾನಗಳು, ತಂದಿರುವ ತಿದ್ದುಪಡಿಗಳು ಹಾಗೂ ಜಾರಿಗೆ ತಂದ ಆಡಳಿತಾತ್ಮಕ ನಿಯಮಗಳ ಬಗ್ಗೆ ಈ ತಜ್ಞರ ಸಮಿತಿಯು ವರದಿಯಲ್ಲಿ ವಿಸ್ತೃತವಾಗಿ ಉಲ್ಲೇಖಿಸಿದೆ.
ಈ ಹಿನ್ನೆಲೆಯಲ್ಲಿ, ಸಲ್ಲಿಕೆಯಾಗಿರುವ ಆಂಧ್ರ ಮಾದರಿಯ ಅಧ್ಯಯನ ವರದಿಯ ಮುಖ್ಯಾಂಶಗಳ ಕುರಿತು ಹಾಗೂ ಕರ್ನಾಟಕದಲ್ಲಿ ಅದನ್ನು ಅನುಷ್ಠಾನಕ್ಕೆ ತರುವ ಮುಂದಿನ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಕರೆಯಬೇಕೆಂದು ಕೋರಲಾಗಿದೆ. ಕರಾವಳಿ ಭಾಗದ ಪ್ರಮುಖ ಜನಪ್ರತಿನಿಧಿಗಳು, ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಪದಾಧಿಕಾರಿಗಳನ್ನು ಒಳಗೊಂಡ ಈ ಸಮಾಲೋಚನಾ ಸಭೆಯನ್ನು ಶೀಘ್ರವಾಗಿ ಆಯೋಜಿಸಿ, ತುಳು ಭಾಷೆಗೆ ರಾಜ್ಯದಲ್ಲಿ ನ್ಯಾಯಬದ್ಧ ಅಧಿಕೃತ ಸ್ಥಾನಮಾನ ಸಿಗುವಂತೆ ಕ್ರಮಕೈಗೊಳ್ಳಬೇಕು ಎಂದು ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಮುಖ್ಯಮಂತ್ರಿಗಳಲ್ಲಿ ಆಗ್ರಹಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









