ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದು ತೀವ್ರ ಕುತೂಹಲ ಮೂಡಿಸಿರುವ ಮಾನವ ಬುರುಡೆ ರಹಸ್ಯ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರ ತಂಡವು ಸ್ಥಳಕ್ಕೆ ಭೇಟಿ ನೀಡಿದೆ. ಘಟನಾ ಸ್ಥಳವಾದ ಬಂಗ್ಲಗುಡ್ಡೆಯ ದಟ್ಟ ಅರಣ್ಯ ಪ್ರದೇಶಕ್ಕೆ ಧಾವಿಸಿದ ಎಫ್ಎಸ್ಎಲ್ ಅಧಿಕಾರಿಗಳು, ಬುರುಡೆ ಪತ್ತೆಯಾದ ನಿಖರ ಜಾಗದಲ್ಲಿ ಸಾಕ್ಷ್ಯಾಧಾರಗಳ ಕ್ರೋಢೀಕರಣ ಮತ್ತು ತಾಂತ್ರಿಕ ಪರಿಶೀಲನೆ ನಡೆಸಿದ್ದಾರೆ. ಈ ಮಹತ್ವದ ತನಿಖಾ ಕಾರ್ಯಾಚರಣೆಯ ವೇಳೆ ವಿಶೇಷ ತನಿಖಾ ತಂಡದ (SIT) ಹಿರಿಯ ಅಧಿಕಾರಿಗಳು ವಿಧಿವಿಜ್ಞಾನ ತಜ್ಞರಿಗೆ ಸಾಥ್ ನೀಡಿದ್ದಾರೆ.
ಈ ಇಡೀ ಬುರುಡೆ ಪತ್ತೆಯ ಸೃಷ್ಟಿ ಮತ್ತು ಷಡ್ಯಂತ್ರದ ಆಯಾಮದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಪ್ರದೀಪ್ ಕುಲಾಲ್ ಎಂಬಾತನನ್ನು ತನಿಖಾ ಸಂಸ್ಥೆಗಳು ಸ್ಥಳ ಮಹಜರು ಪ್ರಕ್ರಿಯೆಗಾಗಿ ಬಂಗ್ಲಗುಡ್ಡೆ ಕಾಡಿಗೆ ಕರೆತಂದಿದ್ದವು. ಎಫ್ಎಸ್ಎಲ್ ಮತ್ತು ಎಸ್ಐಟಿ ಅಧಿಕಾರಿಗಳ ಜಂಟಿ ತಂಡದೊಂದಿಗೆ ತೆರಳಿದ ಈತ, ಕಾಡಿನ ಮಧ್ಯೆ ತಾನು ಬುರುಡೆಯನ್ನು ಇರಿಸಿದ್ದ ಹಾಗೂ ಹೊರತೆಗೆದಿದ್ದ ಸ್ಥಳವನ್ನು ತಜ್ಞರಿಗೆ ಗುರುತಿಸಿ ತೋರಿಸಿದ್ದಾನೆ. ಕಡು ಕತ್ತಲಲ್ಲಿ ಅರಣ್ಯದೊಳಗೆ ಬುರುಡೆ ಹೊರತೆಗೆಯುವ ದೃಶ್ಯಾವಳಿಗಳಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ಈ ಪ್ರದೀಪ್ ಪ್ರಮುಖವಾಗಿ ಕಾಣಿಸಿಕೊಂಡಿದ್ದನು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳು ಬಿಗಿಗೊಂಡಿದ್ದು, ಆರೋಪಿ ಪ್ರದೀಪ್ ಕುಲಾಲ್ ನ್ಯಾಯಾಧೀಶರ ಮುಂದೆ ಬಿಎನ್ಎಸ್ಎಸ್ (BNSS) ಸೆಕ್ಷನ್ 183ರ ಅಡಿಯಲ್ಲಿ ಅಧಿಕೃತವಾಗಿ ತನ್ನ ತಪ್ಪೊಪ್ಪಿಗೆಯ ಹೇಳಿಕೆಯನ್ನು ದಾಖಲಿಸಿದ್ದಾನೆ. ಈ ಸೆಕ್ಷನ್ ಅಡಿ ನೀಡಿರುವ ಸ್ವಯಂಪ್ರೇರಿತ ಹೇಳಿಕೆಯಲ್ಲಿ ಬುರುಡೆ ಷಡ್ಯಂತ್ರದ ಸಂಪೂರ್ಣ ಸತ್ಯಾಸತ್ಯತೆಗಳು ಹಾಗೂ ಇದರ ಹಿಂದಿರುವ ಇತರೆ ಕೈವಾಡಗಳ ಬಗ್ಗೆ ಆತ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾನೆ ಎನ್ನಲಾಗಿದೆ. ಆರೋಪಿಯ ಹೇಳಿಕೆ ಹಾಗೂ ವಿಧಿವಿಜ್ಞಾನ ತಜ್ಞರು ಸಂಗ್ರಹಿಸಿರುವ ಡಿಜಿಟಲ್ ಮತ್ತು ಭೌತಿಕ ಸಾಕ್ಷ್ಯಗಳನ್ನು ಆಧರಿಸಿ ಎಸ್ಐಟಿ ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









