ಚಿಕ್ಕಮಗಳೂರು : ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ಮೂವರು ಅಂತರ್ ರಾಜ್ಯ ಬೇಟೆಗಾರರ ಜಾಲವನ್ನು ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಜಿಲ್ಲೆಯ ಅತ್ತಿಗುಂಡಿ ಗ್ರಾಮದಿಂದ ಮಲಗಾರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಯ ಬಳಿ ಮೇ 19ರಂದು ಈ ಕಾರ್ಯಾಚರಣೆ ನಡೆದಿದೆ. ಬಂಧಿತರನ್ನು ಚಿಕ್ಕಮಗಳೂರು ಮೂಲದ ವೆಂಕಟರಮಣ (35) ಹಾಗೂ ತಮಿಳುನಾಡು ಮೂಲದ ಕನ್ನಿಯಪ್ಪನ್ (25) ಮತ್ತು ಸುರೇಶ (20) ಎಂದು ಗುರುತಿಸಲಾಗಿದೆ. ಕಾಡು ಪ್ರಾಣಿಗಳ ಮಾರಣಹೋಮ ನಡೆಸುತ್ತಿದ್ದ ಈ ಮೂವರನ್ನು ಅಧಿಕಾರಿಗಳು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಸಾಕ್ಷಿದಾರರ (ಪಂಚರ) ಸಮ್ಮುಖದಲ್ಲಿ ಸಿಬ್ಬಂದಿಗಳೊಂದಿಗೆ ಜಂಟಿ ದಾಳಿ ಸಂಘಟಿಸಿದ್ದರು. ಈ ವೇಳೆ ಸಿಕ್ಕಿಬಿದ್ದ ಆರೋಪಿಗಳಿಂದ ಜಿಂಕೆ ಜಾತಿಗೆ ಸೇರಿದ ವನ್ಯಜೀವಿ ಪ್ರಾಣಿಯೊಂದರ ರಕ್ತಸಿಕ್ತ ಕಳೆಬರಹವನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಬೇಟೆಗೆ ಬಳಸಲಾಗಿದ್ದ ಒಂದು ಬಿಳಿ ಬಣ್ಣದ ಬಟ್ಟೆಯ ಬ್ಯಾಗ್, ರಾತ್ರಿ ವೇಳೆ ಬೆಳಕಿಗಾಗಿ ಬಳಸುತ್ತಿದ್ದ ಎರಡು ಹೆಡ್ ಲೈಟ್ಗಳು ಹಾಗೂ ಪ್ರಾಣಿಗಳನ್ನು ಹೊಡೆಯಲು ಇಟ್ಟುಕೊಂಡಿದ್ದ ಎರಡು ಕಾಡು ಜಾತಿಯ ಮರದ ದೊಣ್ಣೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯು ಬೆಂಗಳೂರು ಸಿಐಡಿ ಅರಣ್ಯ ಘಟಕದ ಪೊಲೀಸ್ ಉಪ ಮಹಾನಿರೀಕ್ಷಕಿ ಸಂಗೀತಾ. ಜಿ ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರು (ಐಪಿಎಸ್) ಅವರ ನೇರ ಮಾರ್ಗದರ್ಶನದಲ್ಲಿ ನಡೆದಿದೆ. ದಾಳಿಯಲ್ಲಿ ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕ ಬಾಬುದ್ದೀನ್ ನೇತೃತ್ವ ವಹಿಸಿದ್ದು, ಸಿಬ್ಬಂದಿಗಳಾದ ದೇವರಾಜ, ಕೃಷ್ಣರಾಜ್ ಅರಸ್, ದಿಲೀಪ್, ನಟರಾಜ್, ಹಾಲೇಶ್, ಹೇಮಾವತಿ ಹಾಗೂ ಚಾಲಕ ತಿಮ್ಮಶೆಟ್ಟಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅರಣ್ಯ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಮಡಿಕೇರಿ ಕಚೇರಿ (9480800220) ಅಥವಾ ಮಂಗಳೂರು ಕಚೇರಿ (8277949810) ಸಂಪರ್ಕಿಸುವಂತೆ ಮಂಗಳೂರು ಸಿಐಡಿ ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಅಪರಾಧ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









