ಬಂಟ್ವಾಳ: ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಬಂಟ್ವಾಳಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಸ್ಥಳೀಯ ರೈಲ್ವೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಂದ ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸ್ವೀಕರಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕರಾವಳಿಗೆ ಆಗಮಿಸಿದ್ದ ಕೇಂದ್ರ ಸಚಿವರು, ಗುರುಪುರದ ಜಂಗಮ ಮಠಕ್ಕೆ ತೆರಳಿ ಶ್ರೀ ಶ್ರೀ ರುದ್ರಮುನಿ ಮಹಾಸ್ವಾಮೀಜಿ ಮತ್ತು ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ದರ್ಶನ ಪಡೆದು ಆಶೀರ್ವಾದ ಪಡೆದರು. ಈ ವೇಳೆ ಮಠದ ಜೀರ್ಣೋದ್ಧಾರ ಕಾಮಗಾರಿಗಳ ಪ್ರಗತಿಯನ್ನು ವೀಕ್ಷಿಸಿದರು. ತದನಂತರ ಬಂಟ್ವಾಳ ಶಾಸಕರ ಗಂಜಿಮಠದಲ್ಲಿರುವ ‘ಒಡ್ಡೂರು ಫಾರ್ಮ್ಸ್’ ನಿವಾಸಕ್ಕೆ ಭೇಟಿ ನೀಡಿದ ಸಚಿವರನ್ನು ಶಾಸಕ ರಾಜೇಶ್ ನಾಯ್ಕ್ ಹೂಗುಚ್ಚ ನೀಡಿ, ಶಾಲು ಹೊದಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಮತ್ತು ಭಾಗೀರಥಿ ಮುರುಳ್ಯ ಉಪಸ್ಥಿತರಿದ್ದರು. ಭೇಟಿಯ ವೇಳೆ ಜನಪ್ರತಿನಿಧಿಗಳೊಂದಿಗೆ ಮುಂಬರುವ ಗ್ರಾಮ ಪಂಚಾಯತ್, ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭಾ ಚುನಾವಣೆಗಳ ಕಾರ್ಯತಂತ್ರಗಳು, ಪಕ್ಷ ಸಂಘಟನೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಸಚಿವರು ಸುದೀರ್ಘ ಸಮಾಲೋಚನೆ ನಡೆಸಿದರು.
ಇದೇ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರ ದೀರ್ಘಕಾಲದ ರೈಲ್ವೆ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಶಾಸಕರು ಸಚಿವರಿಗೆ ಸಲ್ಲಿಸಿದರು. ಮನವಿಯಲ್ಲಿ ಒಟ್ಟು 6 ಪ್ರಮುಖ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಈಡೇರಿಸುವಂತೆ ವಿನಂತಿಸಲಾಗಿದೆ. ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಶಾಲಾ ಸಮೀಪದಿಂದ ದೈಪಲ ಸಂಪರ್ಕ ರಸ್ತೆಗೆ ರೈಲ್ವೆ ಬ್ರಿಡ್ಜ್ ನಿರ್ಮಿಸುವುದು, ಕುಂಭೋಧರಿ ಮಠ ದೇವಸ್ಥಾನದಿಂದ ಕುಲಾಲ ಭವನ ಸಂಪರ್ಕ ರಸ್ತೆಗೆ ಅಂಡರ್ಪಾಸ್ ವ್ಯವಸ್ಥೆ ಮಾಡುವುದು, ಹಾಗೂ ಬಿ.ಮೂಡ ರೈಲ್ವೆ ನಿಲ್ದಾಣದ ಬಳಿಯ ಹಿಂದೂ ರುದ್ರಭೂಮಿ ಮತ್ತು ರೈಲ್ವೆ ವಸತಿ ನಿಲಯದ ಸಂಪರ್ಕ ರಸ್ತೆಯನ್ನು ಮೇಲ್ದರ್ಜೆಗೇರಿಸುವುದು ಈ ಮನವಿಯ ಮುಖ್ಯ ಅಂಶಗಳಾಗಿವೆ.
ಉಳಿದಂತೆ, ಗೋಳ್ತಮಜಲು ಗ್ರಾಮದ ದೇವಸ್ಯ-ಕುದ್ರೆಮಾರ್-ತೋಟ ಭಾಗದ ಜನರಿಗೆ ಅನುಕೂಲವಾಗುವಂತೆ ದೇವಸ್ಯ ಕುದ್ರೆಮಾರ್ನಲ್ಲಿ ರೈಲ್ವೆ ಅಂಡರ್ಪಾಸ್ ನಿರ್ಮಾಣ, ನೆಟ್ಟಮುಡ್ನೂರು ಗ್ರಾಮದ ನೇರಳಕಟ್ಟೆ ರೈಲ್ವೆ ನಿಲ್ದಾಣದ ಬಳಿ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ಸುಗಮ ಸಂಚಾರಕ್ಕಾಗಿ ಫುಟ್ಬ್ರಿಡ್ಜ್ ನಿರ್ಮಿಸಿಕೊಡುವಂತೆ ಕೋರಲಾಗಿದೆ. ಇದರೊಂದಿಗೆ, ಮಂಗಳೂರು ಮತ್ತು ಬೆಂಗಳೂರು ನಡುವೆ ಸಂಚರಿಸುವ ರೈಲುಗಳಿಗೆ ಪ್ರಸ್ತುತ ನೇರಳಕಟ್ಟೆ ನಿಲ್ದಾಣದಲ್ಲಿ ನಿಲುಗಡೆ ಇಲ್ಲದ ಕಾರಣ ಸ್ಥಳೀಯ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಇಲ್ಲಿ ಕಡ್ಡಾಯವಾಗಿ ರೈಲು ನಿಲುಗಡೆಗೆ (ಸ್ಟಾಪೇಜ್) ಅವಕಾಶ ಕಲ್ಪಿಸಬೇಕು ಎಂದು ಶಾಸಕರು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಈ ಉನ್ನತ ಮಟ್ಟದ ಭೇಟಿಯ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಮುಖ ನಾಯಕರಾದ ಪೂಜಾ ಪೈ, ನಿತಿನ್ ಕುಮಾರ್, ಕವಿತಾ ಸನಿಲ್, ಅಮಿತ್ ಶೆಟ್ಟಿ, ಚೆನ್ನಪ್ಪ ಆರ್. ಕೋಟ್ಯಾನ್, ಶಿವಪ್ರಸಾದ್ ಶೆಟ್ಟಿ, ದಿನೇಶ್ ಅಮ್ಟೂರು, ರವೀಂದ್ರ ಕಂಬಳಿ, ದೇವಪ್ಪ ಪೂಜಾರಿ, ನಂದರಾಮ ರೈ, ಸೋಹನ ಅಧಿಕಾರಿ, ದೇವದಾಸ್ ಶೆಟ್ಟಿ, ಸಚಿನ್ ಅಡಪ, ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಪ್ರಭಾಕರ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ನಾರ್ಲ ಹಾಗೂ ಪ್ರಣಾಮ್ ರಾಜ್ ಅಜ್ಜಿಬೆಟ್ಟು ಸೇರಿದಂತೆ ಹಲವು ಪಕ್ಷದ ಪ್ರಮುಖರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









