ಮಂಗಳೂರು : ನಗರದ ಮೇರಿಹಿಲ್ ಬಾಂದೋಟ್ಟು ವ್ಯಾಪ್ತಿಯಲ್ಲಿರುವ ಮನೆಯೊಂದರಿಂದ ಸುಮಾರು 6.37 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ವಾಚ್ ಕಳವು ಮಾಡಿದ್ದ ಆರೋಪಿಯನ್ನು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿ ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬಲರಾಮ್ಪುರ್ ಗುಮಾರಿ ಮೂಲದವರಾಗಿದ್ದು, ಪ್ರಸ್ತುತ ಮಂಗಳೂರು ಬಂದರಿನ ಅಜೀಜುದ್ದೀನ್ ರಸ್ತೆಯಲ್ಲಿ ವಾಸವಿದ್ದ 24 ವರ್ಷದ ಜಹೀರುದ್ದೀನ್ ಬಂಧಿತ ಆರೋಪಿಯಾಗಿದ್ದಾನೆ. ಕಳುವಾಗಿದ್ದ ಎಲ್ಲಾ ಒಡವೆಗಳು ಹಾಗೂ ವಾಚನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೇರಿಹಿಲ್ ನಿವಾಸಿ ಜಗದೀಶ್ ದಾಸ್ ಎಂಬುವವರ ಮನೆಯಲ್ಲಿ ಕಳೆದ ಜುಲೈ 6ರಂದು ಕೊಠಡಿಯ ಛಾವಣಿ ಬದಲಾವಣೆ ಹಾಗೂ ಹಾಲ್ನಲ್ಲಿ ಫಾಲ್ಸ್ ಸೀಲಿಂಗ್ ಕಾಮಗಾರಿ ನಡೆಸಲಾಗುತ್ತಿತ್ತು. ಈ ಮೇಸ್ತ್ರಿ ಕಾಮಗಾರಿಯಲ್ಲಿ ಸಹಾಯಕ ಕೆಲಸಗಾರನಾಗಿ ಜಹೀರುದ್ದೀನ್ ಭಾಗವಹಿಸಿದ್ದನು. ಕೆಲಸದ ನಡುವೆ ಮನೆಯ ಟೇಬಲ್ ಡ್ರಾವರ್ನಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಕಡಗ, 17 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ಹಾಗೂ 4 ಗ್ರಾಂ ತೂಕದ ಚಿನ್ನದ ಉಂಗುರಗಳು ಮತ್ತು ಸೋನಾಟಾ ಕಂಪನಿಯ ಗೋಲ್ಡ್ ಕೋಟೆಡ್ ವಾಚ್ ಸೇರಿ ಒಟ್ಟು ₹6.37 ಲಕ್ಷ ಮೌಲ್ಯದ ಸೊತ್ತುಗಳನ್ನು ಆತ ಯಾರಿಗೂ ತಿಳಿಯದಂತೆ ಕಳವು ಮಾಡಿದ್ದನು.
ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಕಾಮಗಾರಿಗೆ ಬಂದಿದ್ದ ಕೆಲಸಗಾರರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆರೋಪಿ ಜಹೀರುದ್ದೀನ್ ತಾನೇ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಆತನಿಂದ ಕಳವು ಮಾಡಿದ್ದ ಎಲ್ಲಾ ಆಭರಣಗಳು ಹಾಗೂ ವಾಚನ್ನು ಜಪ್ತಿ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಯಶಸ್ವಿ ಪತ್ತೆ ಕಾರ್ಯಾಚರಣೆಯಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಡಿ.ಆರ್. ಮಂಜಪ್ಪ, ಸಬ್ಇನ್ಸ್ಪೆಕ್ಟರ್ ಅರುಣ್ ಕುಮಾರ್ ಡಿ. ಹಾಗೂ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










