ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಸಿ ಮೀನು ಸಂರಕ್ಷಣೆಗೆ ಬಳಸುವ ಮಂಜುಗಡ್ಡೆಯ ಗುಣಮಟ್ಟ ಹಾಗೂ ಶುಚಿತ್ವವನ್ನು ಖಚಿತಪಡಿಸಿಕೊಳ್ಳಲು, ಆರೋಗ್ಯ ಸಚಿವರ ಆದೇಶದಂತೆ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ನೇತೃತ್ವದ ತಂಡವು ವಿವಿಧ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಮಂಗಳೂರಿನ ಬಂದರು ಧಕ್ಕೆ ಪ್ರದೇಶದಲ್ಲಿರುವ ಪ್ರಮುಖ ಐಸ್ ಪ್ಲಾಂಟ್ಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡವು, ಮಂಜುಗಡ್ಡೆ ಮಾದರಿಗಳನ್ನು ಹಾಗೂ ಮಂಜುಗಡ್ಡೆ ತಯಾರಿಕೆಗೆ ಬಳಸಲಾಗುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಿದೆ.
ಖಾಸಗಿ ಟ್ಯಾಂಕರ್ಗಳ ಮೂಲಕ ಸಿಹಿ ನೀರನ್ನು ಖರೀದಿಸಿ ಐಸ್ ತಯಾರಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದ ಸೂಕ್ತ ಪ್ರಯೋಗಾಲಯ ವರದಿಗಳನ್ನು ಪಡೆದುಕೊಂಡ ನಂತರವಷ್ಟೇ ಉತ್ಪಾದನೆ ಮುಂದುವರಿಸಬೇಕು ಎಂದು ಘಟಕದ ಮಾಲೀಕರಿಗೆ ಖಡಕ್ ನಿರ್ದೇಶನ ನೀಡಲಾಗಿದೆ.
ಇದೇ ವೇಳೆ ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಪ್ರಾಥಮಿಕ ಸಹಕಾರ ಸಂಘವು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಶುದ್ಧ ಮತ್ತು ನೈರ್ಮಲ್ಯಯುತ ಮಂಜುಗಡ್ಡೆ ತಯಾರಿಸುತ್ತಿರುವುದನ್ನು ತನಿಖಾ ತಂಡವು ಪರಿಶೀಲಿಸಿ ಧೃವೀಕರಿಸಿದೆ.
ತಾಜಾ ಮೀನುಗಳನ್ನು ಸುರಕ್ಷಿತವಾಗಿಡಲು ಕೇವಲ ಶುದ್ಧ ನೀರಿನಿಂದ ತಯಾರಿಸಿದ ಉತ್ತಮ ದರ್ಜೆಯ ಮಂಜುಗಡ್ಡೆಯನ್ನಷ್ಟೇ ಬಳಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಎಲ್ಲಾ ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ನೀಡಿದೆ.
ಮೀನಿನ ಸಂರಕ್ಷಣೆಗಾಗಿ ಫಾರ್ಮಲಿನ್ ಸೇರಿದಂತೆ ಯಾವುದೇ ರೀತಿಯ ಅಪಾಯಕಾರಿ ಅಥವಾ ರಸಾಯನಿಕ ವಸ್ತುಗಳನ್ನು ಬಳಸಿದರೆ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯು ಸ್ಪಷ್ಟ ಎಚ್ಚರಿಕೆ ರವಾನಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









