ಮಂಗಳೂರು : ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಅಕ್ರಮವಾಗಿ ಆಶ್ರಯ ಪಡೆದಿದ್ದ 11 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಇತ್ತೀಚೆಗೆ ವಶಕ್ಕೆ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿ ಇಡೀ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಈ ಅಕ್ರಮ ವಲಸಿಗರನ್ನು ಗಡಿ ದಾಟಿಸಿ ಮಂಗಳೂರಿಗೆ ತಂದು ವಿವಿಧ ಕೆಲಸಗಳಿಗೆ ಸೇರಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮೂವರು ಪ್ರಮುಖ ಮಧ್ಯವರ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎಲ್ಲರನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪಶ್ಚಿಮ ಬಂಗಾಳದ ಮೊಯಿದ್ದೀನ್ ಇಸ್ಲಾಂ, ದಿಲ್ವಾರ್ ಹುಸೇನ್ ಮತ್ತು ರಸೂಲ್ ಇಸ್ಲಾಂ ಎಂದು ಗುರುತಿಸಲಾಗಿದೆ. ಈ ದಲ್ಲಾಳಿಗಳು ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಒಪ್ಪಂದದ ಆಧಾರದ ಮೇಲೆ ಕಾರ್ಮಿಕರನ್ನು ಮಂಗಳೂರಿಗೆ ಕರೆತರುತ್ತಿದ್ದರು. ಇದೇ ವ್ಯವಹಾರದ ಮರೆಯಲ್ಲಿ, ದೇಶಿ ಕಾರ್ಮಿಕರ ಜೊತೆಗೆ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಸಾಗಿಸಿ ಕರಾವಳಿಯ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸಕ್ಕೆ ನಿಯೋಜಿಸುತ್ತಿದ್ದ ಆಘಾತಕಾರಿ ಸತ್ಯ ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಮೊಯಿದ್ದೀನ್ ಇಸ್ಲಾಂ ಹಾಗೂ ದಿಲ್ವಾರ್ ಹುಸೇನ್ನನ್ನು ಮಂಗಳೂರಿನಲ್ಲಿಯೇ ಹೆಡೆಮುರುಕು ಕಟ್ಟಿದ್ದಾರೆ. ಇದೇ ವೇಳೆ ತಪ್ಪಿಸಿಕೊಂಡಿದ್ದ ಮತ್ತೊಬ್ಬ ಪ್ರಮುಖ ದಲ್ಲಾಳಿ ರಸೂಲ್ ಇಸ್ಲಾಂ ಪತ್ತೆಗಾಗಿ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರು ಕೋಲ್ಕತ್ತಾ ಪೊಲೀಸರೊಂದಿಗೆ ತಕ್ಷಣದ ಸಂಪರ್ಕ ಸಾಧಿಸಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಕೋಲ್ಕತ್ತಾದಲ್ಲಿಯೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿ ಬಂಧನಕ್ಕೊಳಗಾಗಿರುವ ರಸೂಲ್ ಇಸ್ಲಾಂನನ್ನು ಟ್ರಾನ್ಸಿಟ್ ವಾರಂಟ್ ಮೂಲಕ ಮಂಗಳೂರಿಗೆ ಕರೆತರಲು ಮಂಗಳೂರು ಪೊಲೀಸರ ವಿಶೇಷ ತಂಡ ಈಗಾಗಲೇ ಪಶ್ಚಿಮ ಬಂಗಾಳಕ್ಕೆ ತೆರಳಿದೆ. ಆರೋಪಿಯನ್ನು ನಗರಕ್ಕೆ ಕರೆತಂದು ತೀವ್ರ ವಿಚಾರಣೆ ನಡೆಸಿದ ಬಳಿಕ ಈ ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲದ ಹಿಂದಿರುವ ಇತರ ಶಕ್ತಿಗಳು ಹಾಗೂ ಕರಾವಳಿಯಲ್ಲಿ ಅಡಗಿರುವ ಮತ್ತಷ್ಟು ಅಕ್ರಮ ವಲಸಿಗರ ಪತ್ತೆಯಾಗಲಿದೆ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










