ಮಂಗಳೂರು : ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಚಿನ್ನದ ವ್ಯಾಪಾರಿಯೊಬ್ಬರಿಗೆ ಬರೋಬ್ಬರಿ 240 ಗ್ರಾಂ ಚಿನ್ನಕ್ಕೆ ವಂಚನೆ ಮಾಡಿದ ಅಂತಾರಾಜ್ಯ ವಂಚಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಂಚಕನಿಂದ ಒಟ್ಟು ರೂ. 31 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಬಿಸ್ಕೀಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ನಡೆದಿದ್ದು 2025ರ ನವೆಂಬರ್ 21 ಮತ್ತು 22 ರಂದು. ನವೆಂಬರ್ 21 ರಂದು, ‘ಅರುಣ್’ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಉರ್ವಾಸ್ಟೋರ್ನ ಚಿಲಿಂಬಿಯ ಗುಜ್ಜಾಡಿ ಚೆಂಬರ್ಸ್ನಲ್ಲಿರುವ ಸ್ವರ್ಣ ಜುವೆಲರ್ಸ್ಗೆ ಭೇಟಿ ನೀಡಿದ್ದ. ತಾನು ಬಿಜೈ ಕಾಫಿಕಾಡ್ನ ಅಜಂತ್ ಬಿಸಿನೆಸ್ ಸೆಂಟರ್ನಲ್ಲಿ ಆಫೀಸ್ ತೆರೆಯುತ್ತಿದ್ದು, ಅಲ್ಲಿಗೆ ಬರುವ ಅತಿಥಿಗಳಿಗೆ ನೀಡಲು 10 ಗ್ರಾಂ ತೂಕದ 24 ಚಿನ್ನದ ಬಿಸ್ಕೀಟ್ಗಳು ಬೇಕೆಂದು ಹೇಳಿ, ಬಿಸ್ಕೀಟ್ಗಳ ವಿನ್ಯಾಸವನ್ನು ಆಯ್ಕೆ ಮಾಡಿಕೊಂಡಿದ್ದ.
ನವೆಂಬರ್ 22 ರಂದು ಮಧ್ಯಾಹ್ನ 12 ಗಂಟೆಗೆ ಅಜಂತ್ ಬಿಸಿನೆಸ್ ಸೆಂಟರ್ನಲ್ಲಿರುವ ತನ್ನ ಆಫೀಸಿಗೆ ಚಿನ್ನ ತಲುಪಿಸಿದ ಕೂಡಲೇ ಹಣವನ್ನು RTGS ಮೂಲಕ ವರ್ಗಾಯಿಸುವುದಾಗಿ ಜುವೆಲರ್ಸ್ ಸಿಬ್ಬಂದಿಯನ್ನು ನಂಬಿಸಿದ್ದಾನೆ. ಅದರಂತೆ, ಸ್ವರ್ಣ ಜುವೆಲರ್ಸ್ ಸಿಬ್ಬಂದಿ ಚಿನ್ನದ ಬಿಸ್ಕೀಟ್ಗಳನ್ನು ತೆಗೆದುಕೊಂಡು ಹೋದಾಗ, ಆರೋಪಿಯು ಅವರನ್ನು ಅಜಂತ ಬಿಸಿನೆಸ್ ಸೆಂಟರ್ನ 5ನೇ ಮಹಡಿಯಲ್ಲಿರುವ ಕೆಫೆಟೇರಿಯಾಗೆ ಕರೆದೊಯ್ದಿದ್ದಾನೆ. ಅಲ್ಲಿ ತಲಾ 10 ಗ್ರಾಂ ತೂಕದ, 24 ಕ್ಯಾರೆಟ್ ಶುದ್ಧತೆಯ 24 ಚಿನ್ನದ ಬಿಸ್ಕೀಟ್ಗಳನ್ನು ಪಡೆದುಕೊಂಡು, “3ನೇ ಮಹಡಿಯಲ್ಲಿರುವ ಆಫೀಸಿನಲ್ಲಿ RTGS ಮಾಡುತ್ತೇನೆ” ಎಂದು ಹೇಳಿ ಹಣ ಪಾವತಿ ಮಾಡದೇ ಪರಾರಿಯಾಗಿದ್ದಾನೆ. ಸುಮಾರು ರೂ. 31,00,000 ಮೌಲ್ಯದ ಚಿನ್ನವನ್ನು ಪಡೆದು ವಂಚಿಸಿರುವ ಬಗ್ಗೆ ಸ್ವರ್ಣ ಜುವೆಲರ್ಸ್ ಮಾಲೀಕರಾದ ಅಜಯ್ ರಾಮದಾಸ ನಾಯಕ್ ಅವರು ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಾದ ಕೂಡಲೇ, ಉರ್ವಾ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಾಂತ್ರಿಕ ಮಾಹಿತಿಯ ಮೂಲಕ ತನಿಖೆ ಆರಂಭಿಸಿದರು. ಆರೋಪಿಯು ತಮಿಳುನಾಡಿನ ಕೊಯಮತ್ತೂರುನಲ್ಲಿರುವ ಬಗ್ಗೆ ಮಾಹಿತಿ ಪಡೆದು, ನವೆಂಬರ್ 26, 2025 ರಂದು ಅಲ್ಲಿನ ಪುಲಿಯಕುಲಂ ಎಂಬಲ್ಲಿ ಆತನನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತನ ನಿಜವಾದ ಹೆಸರು ಪುಗಲ್ ವಾಸನ್ @ ಪುಗಲ್ ಹಸನ್ @ ಅರುಣ್ (ಪ್ರಾಯ: 50 ವರ್ಷ) ಎಂದು ತಿಳಿದು ಬಂದಿದೆ. ಈತ ತಮಿಳುನಾಡಿನ ಕೊಯಮತ್ತೂರು, ಸಿಂಗನಲ್ಲೂರು ನಿವಾಸಿಯಾಗಿದ್ದು, ನಕಲಿ ಹೆಸರುಗಳನ್ನು ಬಳಸಿ ವಂಚಿಸುವ ಪ್ರವೃತ್ತಿ ಹೊಂದಿದ್ದಾನೆ. ಆರೋಪಿಯಿಂದ ಪ್ರಕರಣಕ್ಕೆ ಸಂಬಂಧಿಸಿದ ರೂ. 31,04,000 ಮೌಲ್ಯದ, 240 ಗ್ರಾಂ ತೂಕದ, 24 ಕ್ಯಾರೆಟ್ ಶುದ್ಧತೆಯ ಚಿನ್ನದ ಬಿಸ್ಕೀಟ್ಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ.
ಈತ ಕೇವಲ ಮಂಗಳೂರಿನಲ್ಲಿ ಮಾತ್ರವಲ್ಲದೆ, ಈ ಹಿಂದೆ ಮಹಾರಾಷ್ಟ್ರದ ಮುಂಬೈ, ತೆಲಂಗಾಣದ ಹೈದರಾಬಾದ್, ತಮಿಳುನಾಡಿನ ಚಿತ್ತೋಡ್ ಮತ್ತು ಆಂಧ್ರಪ್ರದೇಶದ ತಿರುಪತಿಯಲ್ಲಿಯೂ ಇದೇ ಮಾದರಿಯ ವಂಚನೆ ಕೃತ್ಯಗಳನ್ನು ಎಸಗಿರುವುದು ಮತ್ತು ಈ ಬಗ್ಗೆ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಯಶಸ್ವಿ ಕಾರ್ಯಾಚರಣೆಯು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸುಧೀರ್ ಕುಮಾರ್ ರೆಡ್ಡಿ, ಐ.ಪಿ.ಎಸ್. ರವರ ಮಾರ್ಗದರ್ಶನ ಹಾಗೂ ಸಹಾಯಕ ಪೊಲೀಸ್ ಆಯುಕ್ತರು ಶ್ರೀ ಪ್ರತಾಪ್ ಸಿಂಗ್ ತೋರಟ್ ರವರ ನೇತೃತ್ವದಲ್ಲಿ, ಉರ್ವಾ ಪೊಲೀಸ್ ಠಾಣೆಯ ನಿರೀಕ್ಷಕರಾದ ಶ್ಯಾಮ್ ಸುಂಧರ್ ಹೆಚ್.ಎಮ್ ಮತ್ತು ಸಿಬ್ಬಂದಿಗಳಿಂದ ನಡೆದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









