ರಿಯಾದ್: ಕಳೆದ ಎರಡು ದಶಕಗಳಿಂದ ಸೌದಿ ಅರೇಬಿಯಾದ ಕಾರಾಗೃಹದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಕೊಡಂಪುಳ ನಿವಾಸಿ ಅಬ್ದುಲ್ ರಹೀಮ್ ಕೊನೆಗೂ ಜೈಲ ಮುಕ್ತರಾಗಿದ್ದಾರೆ. ಅವರ ಬಿಡುಗಡೆಗೆ ಸಂಬಂಧಿಸಿದ ಅಧಿಕೃತ ಆದೇಶ ಪತ್ರಕ್ಕೆ ಸೌದಿ ಅರೇಬಿಯಾದ ಉನ್ನತ ಅಧಿಕಾರಿಗಳು ಅಂತಿಮ ಸಹಿ ಹಾಕಿದ್ದು, ಭಾರತಕ್ಕೆ ಮರಳಲು ಬೇಕಾದ ಎಕ್ಸಿಟ್ ವೀಸಾ ಪ್ರಕ್ರಿಯೆ ಕೂಡ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸದ್ಯ ಗಡೀಪಾರು ಕೇಂದ್ರಕ್ಕೆ ಸ್ಥಳಾಂತರಗೊಂಡಿರುವ ರಹೀಮ್, ವಲಸೆ ಇಲಾಖೆಯ ಕೊನೆಯ ಹಂತದ ಕಾನೂನು ಪ್ರಕ್ರಿಯೆಗಳು ಮುಗಿದ ತಕ್ಷಣವೇ ತಾಯ್ನಾಡಿಗೆ ವಿಮಾನವೇರಲಿದ್ದಾರೆ ಎಂದು ಅವರ ಕಾನೂನು ಸಹಾಯ ಸಮಿತಿ ಸ್ಪಷ್ಟಪಡಿಸಿದೆ.
ಮೂಲತಃ 2006ರಲ್ಲಿ ಸೌದಿಗೆ ಕೆಲಸಕ್ಕೆ ಹೋಗಿದ್ದ ಅಬ್ದುಲ್ ರಹೀಮ್, ಅಲ್ಲಿನ ತಮ್ಮ ಮಾಲೀಕನ 14 ವರ್ಷದ ವಿಶೇಷ ಚೇತನ ಮಗನ ಪಾಲನೆಯ ಜವಾಬ್ದಾರಿ ಹೊತ್ತಿದ್ದರು. ಆದರೆ ದುರದೃಷ್ಟವಶಾತ್ ಆ ಬಾಲಕ ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದರಿಂದ, ರಹೀಮ್ ಅವರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿತ್ತು. ಆ ಸಾವು ಕೇವಲ ಒಂದು ಅಪಘಾತ ಎಂದು ರಹೀಮ್ ಎಷ್ಟೇ ವಾದಿಸಿದರೂ ಕೋರ್ಟ್ನಲ್ಲಿ ಅದು ಸಾಬೀತಾಗದ ಕಾರಣ, ಸೌದಿ ನ್ಯಾಯಾಲಯವು 2012ರಲ್ಲಿ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಈ ಮರಣದಂಡನೆಯಿಂದ ರಹೀಮ್ ಅವರನ್ನು ರಕ್ಷಿಸಲು 2024ರಲ್ಲಿ ಜಾಗತಿಕ ಮಟ್ಟದಲ್ಲಿ ಭಾರಿ ದೊಡ್ಡ ಮಾನವೀಯ ಅಭಿಯಾನವೊಂದು ನಡೆದಿತ್ತು. ಸಂತ್ರಸ್ತ ಅರಬ್ ಕುಟುಂಬವು ರಕ್ತದ ಹಣವಾಗಿ (ದಿಯಾ) ಕೇಳಿದ್ದ ಬರೋಬ್ಬರಿ 15 ಮಿಲಿಯನ್ ಸೌದಿ ರಿಯಾಲ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು 34 ಕೋಟಿ ರೂಪಾಯಿ) ಮೊತ್ತವನ್ನು ಕೇರಳಿಗರು ಹಾಗೂ ಪ್ರಪಂಚದಾದ್ಯಂತದ ಸಹೃದಯಿಗಳು ಒಟ್ಟಾಗಿ ಧನಸಂಗ್ರಹಣೆ ಮೂಲಕ ಒಟ್ಟುಗೂಡಿಸಿದ್ದರು. ಈ ಬೃಹತ್ ಪರಿಹಾರದ ಹಣ ಕೈ ಸೇರಿದ ಬಳಿಕ ಸಂತ್ರಸ್ತ ಕುಟುಂಬಸ್ಥರು ಕ್ಷಮಾದಾನ ನೀಡಲು ಒಪ್ಪಿದ್ದರಿಂದ, ಸೌದಿ ಕೋರ್ಟ್ ಮರಣದಂಡನೆಯನ್ನು ರದ್ದುಗೊಳಿಸಿತ್ತು.
ಆದರೆ, ಮರಣದಂಡನೆ ರದ್ದಾದರೂ ಸಾರ್ವಜನಿಕ ಹಕ್ಕುಗಳ ಉಲ್ಲಂಘನೆ ಕಾಯ್ದೆಯಡಿ ರಿಯಾದ್ ಕ್ರಿಮಿನಲ್ ನ್ಯಾಯಾಲಯವು ರಹೀಮ್ ಅವರಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯ ಅವಧಿಯು ಮೇ 19ರ ಮಧ್ಯರಾತ್ರಿಯೇ ಮುಕ್ತಾಯಗೊಂಡಿತ್ತಾದರೂ, ಅಲ್ಲಿನ ಈದ್ ರಜೆಗಳ ಕಾರಣದಿಂದಾಗಿ ಬಿಡುಗಡೆಯ ಆಡಳಿತಾತ್ಮಕ ಪ್ರಕ್ರಿಯೆಗಳು ಸ್ವಲ್ಪ ವಿಳಂಬವಾಗಿದ್ದವು. ಇದೀಗ ತುರ್ತು ಕಾನೂನು ಕ್ರಮಗಳ ಮೂಲಕ ಸೌದಿ ಸರ್ಕಾರ ಬಿಡುಗಡೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದ್ದು, 20 ವರ್ಷಗಳ ಸುದೀರ್ಘ ಜೈಲು ಶಿಕ್ಷೆ ಅನುಭವಿಸಿದ ರಹೀಮ್ ಹೆತ್ತಮ್ಮನ ಮಡಿಲು ಸೇರಲು ಕ್ಷಣಗಣನೆ ಆರಂಭವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ವಿದೇಶ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









