ಕೊಲ್ಲೂರು : ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಶುಕ್ರವಾರ (ಜೂನ್ 12) ಮಧ್ಯಾಹ್ನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಜಗನ್ಮಾತೆಯ ದರ್ಶನ ಪಡೆದು ಪ್ರಾರ್ಥಿಸಿದ ಅವರು, ದೇವಿಗೆ ಸೀರೆ ಹಾಗೂ 1 ಕೆಜಿ 600 ಗ್ರಾಂ ತೂಕದ ಆಕರ್ಷಕ ಬೆಳ್ಳಿಯ ಖಡ್ಗವನ್ನು ಕಾಣಿಕೆಯಾಗಿ ಸಮರ್ಪಿಸಿದರು.
ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಅವರು, ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ತಲುಪಿ ಮೊದಲು ಸ್ಥಳೀಯ ಪ್ರವಾಸಿ ಮಂದಿರಕ್ಕೆ ತೆರಳಿದರು. ಕೆಂಪು ಶಲ್ಯ ಧರಿಸಿದ್ದ ತಮಿಳುನಾಡು ಮುಖ್ಯಮಂತ್ರಿಗಳಿಗೆ ದೇವಸ್ಥಾನದ ಅರ್ಚಕರು ಪೂರ್ಣಕುಂಭ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ನೆರೆದಿದ್ದ ಎಲ್ಲರಿಗೂ ವಿನಮ್ರವಾಗಿ ಕೈಮುಗಿದ ವಿಜಯ್ ಅವರು ದೇಗುಲದ ಆವರಣ ಪ್ರವೇಶಿಸಿದರು. ಅರ್ಚಕರು ವಿಶೇಷ ಮಂತ್ರಘೋಷಗಳೊಂದಿಗೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ಸಿಎಂ ಕೈಗೆ ರಕ್ಷಾಸೂತ್ರವನ್ನು ಕಟ್ಟಿದರು. ಸುಮಾರು 30 ನಿಮಿಷಗಳ ಕಾಲ ಅವರು ಗರ್ಭಗುಡಿಯ ಒಳಗಿದ್ದು ದೇವಿಯ ಆರಾಧನೆ ಮಾಡಿದರು. ಇದೇ ವೇಳೆ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಮುಖ್ಯಮಂತ್ರಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಖ್ಯಾತ ನಟರೂ ಆಗಿರುವ ಸಿಎಂ ವಿಜಯ್ ಅವರನ್ನು ಕಣ್ಣಾರೆ ವೀಕ್ಷಿಸಲು ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಮಧ್ಯಾಹ್ನ 1 ಗಂಟೆಯಿಂದಲೇ ದೇವಾಲಯದ ಆವರಣದಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಕಡು ಮಳೆಯನ್ನೂ ಲೆಕ್ಕಿಸದೆ, ಅವರನ್ನು ನೋಡಲು ಮರ ಹಾಗೂ ಕಟ್ಟಡಗಳ ಮೇಲೇರಿ ಕುಳಿತಿದ್ದರು. ನೆರೆದಿದ್ದ ಕುತೂಹಲಿಗಳು ಟಿವಿಕೆ (TVK) ಪಕ್ಷದ ಚಿಹ್ನೆಯಾದ ಶಿಳ್ಳೆ (ವಿಷಲ್) ಹಾಕಿ, ವಿಜಯ್ ಪರವಾಗಿ ಜಯಘೋಷಗಳನ್ನು ಕೂಗಿದರು. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿದ್ದ ಭಾರೀ ಪೊಲೀಸ್ ಪಡೆ ಜನದಟ್ಟಣೆಯನ್ನು ನಿಯಂತ್ರಿಸಿ ವ್ಯಾಪಕ ಭದ್ರತೆ ಒದಗಿಸಿತು.
ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಎಂ.ಜಿ. ರಾಮಚಂದ್ರನ್ ಹಾಗೂ ಜಯಲಲಿತಾ ಅವರು ಕೊಲ್ಲೂರು ಮೂಕಾಂಬಿಕಾ ದೇವಿಯ ಪರಮ ಭಕ್ತರಾಗಿದ್ದು, ಇಲ್ಲಿಗೆ ಭೇಟಿ ನೀಡಿ ವಿಶೇಷ ಪೂಜೆ ಮತ್ತು ಹರಕೆಗಳನ್ನು ಸಲ್ಲಿಸುತ್ತಿದ್ದರು ಎಂಬುದು ಗಮನಾರ್ಹ.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









