ಮಂಗಳೂರು : ಸಹಕಾರ ವಲಯದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿರುವ ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಯಭೇರಿ ಬಾರಿಸಿದೆ. ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ಜರುಗಿದ ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಶೂರೆನ್ಸ್ ಕಂಪನಿಯ ಪ್ರತಿಷ್ಠಿತ “ಲಕ್ಷ್ಯ–2026” ಜಾಗತಿಕ ಸಮ್ಮೇಳನದಲ್ಲಿ ಸಂಘಕ್ಕೆ ಅತ್ಯುನ್ನತ ಪ್ರಶಸ್ತಿ ಒಲಿದುಬಂದಿದೆ. ರಿಟೇಲ್ ಬಿಸಿನೆಸ್ ವಿಭಾಗದಲ್ಲಿ ರಾಷ್ಟ್ರಮಟ್ಟದ ಗಮನಾರ್ಹ ಮೈಲಿಗಲ್ಲು ಸ್ಥಾಪಿಸಿ, ನಿಗದಿಪಡಿಸಿದ ಆರೋಗ್ಯ ವಿಮಾ ಯೋಜನೆಯ ಗುರಿಯನ್ನು ಮೀರಿ ಅಭೂತಪೂರ್ವ ಸಾಧನೆ ಮಾಡಿದ್ದಕ್ಕಾಗಿ ಈ ಗೌರವ ಲಭಿಸಿದೆ. ಸಮ್ಮೇಳನದ ಅದ್ಧೂರಿ ವೇದಿಕೆಯಲ್ಲಿ ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಶೂರೆನ್ಸ್ ಕಂಪನಿಯ ಭಾರತೀಯ ಮುಖ್ಯಸ್ಥರಾದ ಶಶಾಂಕ್ ಚಾಪೇಕರ್ ಮತ್ತು ಏಜೆನ್ಸಿ ವಿಸ್ತರಣಾ ಮುಖ್ಯಸ್ಥರಾದ ಪ್ರಸಾದ್ ಶೆಟ್ಟಿ ಅವರು ಆತ್ಮಶಕ್ತಿ ಸಂಘದ ಅಧ್ಯಕ್ಷರಾದ ‘ಸಹಕಾರ ರತ್ನ’ ಚಿತ್ತರಂಜನ್ ಬೋಳಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸತ್ಕರಿಸಿದರು. ಈ ಸಂಭ್ರಮದ ಕ್ಷಣಕ್ಕೆ ದಕ್ಷಿಣ ವಲಯದ ಮುಖ್ಯಸ್ಥರಾದ ದವೇರ್ಶ್ ಮೊಹಮ್ಮದ್ ಹಾಗೂ ದಕ್ಷಿಣ ಭಾರತ ಏಜೆನ್ಸಿ ಮುಖ್ಯಸ್ಥರಾದ ವಿಶಾಲ್ ಸುರಣ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.
ಕೇವಲ ಬ್ಯಾಂಕಿಂಗ್ ವ್ಯವಹಾರಗಳಿಗೆ ಸೀಮಿತವಾಗದೆ, ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಈ ಸಹಕಾರಿ ಸಂಘವು ನಿರಂತರವಾಗಿ ಶ್ರಮಿಸುತ್ತಿದೆ. ತನ್ನ ವಿಭಿನ್ನ ಶಾಖೆಗಳ ವಾರ್ಷಿಕೋತ್ಸವದ ನೆನಪಿಗಾಗಿ ಇದುವರೆಗೆ ಬರೊಬ್ಬರಿ 110 ಉಚಿತ ಆರೋಗ್ಯ ಶಿಬಿರಗಳನ್ನು ಸಂಘಟಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಜನಪರ ಶಿಬಿರಗಳ ಮೂಲಕ ಸಮಾಜದ ನಿರ್ಗತಿಕರಿಗೆ ಉಚಿತ ಔಷಧಿ, ಸಾಮಾನ್ಯ ಹಾಗೂ ದಂತ ಆರೋಗ್ಯ ತಪಾಸಣೆಗಳು ಮತ್ತು ಉಚಿತ ಹೆಲ್ತ್ ಕಾರ್ಡ್ಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಸಾಮಾಜಿಕ ಕಳಕಳಿಯ ಭಾಗವಾಗಿ 950ಕ್ಕೂ ಹೆಚ್ಚು ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಒದಗಿಸುವುದರೊಂದಿಗೆ, 21,000ಕ್ಕೂ ಅಧಿಕ ಕನ್ನಡಕಗಳನ್ನು ಉಚಿತವಾಗಿ ಹಂಚಿ ಜನರ ಬಾಳಿಗೆ ಬೆಳಕಾಗಿದೆ.
ಸದಸ್ಯರ ಹಿತದೃಷ್ಟಿಯಿಂದ ವಿಮಾ ರಂಗದ ಹತ್ತಕ್ಕೂ ಹೆಚ್ಚು ಮುಂಚೂಣಿ ಕಂಪನಿಗಳೊಂದಿಗೆ ಕಾರ್ಯತಂತ್ರದ ಒಪ್ಪಂದ ಮಾಡಿಕೊಂಡಿರುವ ಸಂಘವು ಆರೋಗ್ಯ, ವಾಹನ ಹಾಗೂ ಜೀವ ವಿಮಾ ಸೇವೆಗಳನ್ನು ಅತ್ಯಂತ ಕೈಗೆಟುಕುವ ದರದಲ್ಲಿ ಒದಗಿಸುತ್ತಿದೆ. ಸಂಘದ ಈ ಆಕರ್ಷಕ ಕೊಡುಗೆಯ ಲಾಭವನ್ನು ಅಸಂಖ್ಯಾತ ಗ್ರಾಹಕರು ಪಡೆದುಕೊಂಡಿದ್ದಾರೆ. ಆರೋಗ್ಯ ವಿಮಾ ವಿಭಾಗದಲ್ಲಿ ನಿರಂತರವಾಗಿ ನೀಡಿದ ಅತ್ಯುತ್ತಮ ಪ್ರದರ್ಶನ ಹಾಗೂ ನಿಗದಿತ ಗುರಿಗಳನ್ನೂ ಮೀರಿದ ಸಾಧನೆಯ ಫಲವಾಗಿ, ಈ ಸಂಸ್ಥೆಯು ಕಳೆದ 10 ವರ್ಷಗಳಿಂದ ಸತತವಾಗಿ ವಿವಿಧ ಉನ್ನತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಾ ಮುನ್ನಡೆಯುತ್ತಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









