ಉಡುಪಿ:: ದೇಶದ ಪ್ರತಿಷ್ಠಿತ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಕೌಟುಂಬಿಕ ಧಾರ್ಮಿಕ ಗುರುಗಳ ಸಮೇತರಾಗಿ ಆಗಮಿಸಿದ ಅವರು, ಜಗನ್ಮಾತೆಯ ದರ್ಶನ ಪಡೆದು ಪುನೀತರಾದರು. ಕ್ಷೇತ್ರಕ್ಕೆ ಆಗಮಿಸಿದ ಈ ಗಣ್ಯ ಅತಿಥಿಗೆ ದೇವಾಲಯದ ಆಡಳಿತ ಮಂಡಳಿ ಹಾಗೂ ಪ್ರಧಾನ ಅರ್ಚಕರ ವತಿಯಿಂದ ಸಾಂಪ್ರದಾಯಿಕವಾಗಿ ಆತ್ಮೀಯ ಸ್ವಾಗತ ಕೋರಲಾಯಿತು.
ಮೂಕಾಂಬಿಕೆಯ ಸನ್ನಿಧಿಯಲ್ಲಿ ಭಕ್ತಿಭಾವದಿಂದ ನಡೆದುಕೊಂಡ ಅನಂತ್ ಅಂಬಾನಿ ಅವರು, ದೇವಿಗೆ ಮಹಾಪೂಜೆ ಸೇರಿದಂತೆ ವಿವಿಧ ವಿಶೇಷ ಸೇವೆ ಹಾಗೂ ಪೂಜೆ-ಪುನಸ್ಕಾರಗಳನ್ನು ನೆರವೇರಿಸಿದರು. ಗರ್ಭಗುಡಿಯ ಮುಂಭಾಗದಲ್ಲಿ ಕೆಲಕಾಲ ಮೌನವಾಗಿ ನಿಂತು ಪ್ರಾರ್ಥನೆ ಸಲ್ಲಿಸಿದ ಅವರು ದೇವಿಯ ಕೃಪಾಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಹಾಗೂ ಅರ್ಚಕರು ಅವರಿಗೆ ಶಾಲು ಹೊದಿಸಿ, ದೇವಿಯ ಶೇಷವಸ್ತ್ರ ಹಾಗೂ ಮಂತ್ರಾಕ್ಷತೆ ಪ್ರಸಾದವನ್ನು ನೀಡಿ ಗೌರವಪೂರ್ವಕವಾಗಿ ಸತ್ಕರಿಸಿದರು.
ಅನಂತ್ ಅಂಬಾನಿ ಶನಿವಾರ (ಜೂ.13) ದೇವಸ್ಥಾನಕ್ಕೆ ಭೇಟಿ ನೀಡುವ ಬಗ್ಗೆ ದಿನಾಂಕ ನಿಗದಿಯಾಗಿತ್ತು. ಆದರೆ ಭಾರೀ ಮಳೆಯ ಕಾರಣ ಮುಂಬಯಿನಿಂದ ವಿಮಾನ ಹಾರಾಟ ಸಾಧ್ಯವಾಗದೇ, ಕೊಲ್ಲೂರು ಭೇಟಿಯನ್ನು ಮುಂದೂಡಿದ್ದರು. ಭಾನುವಾರ ಸಂಜೆ ಅನಂತ್ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









