ಮಂಗಳೂರು : ಕಳೆದ ಒಂದು ವರ್ಷದಿಂದ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಅತ್ಯಂತ ಸಮರ್ಥವಾಗಿ ಕಾಪಾಡಿಕೊಂಡು ಬಂದಿರುವ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಇಬ್ಬರು ಜನಪ್ರಿಯ ಅಧಿಕಾರಿಗಳನ್ನು ಜಿಲ್ಲೆಯಲ್ಲೇ ಉಳಿಸಿಕೊಳ್ಳಲು ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು, ಹೊಸ ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಆಡಳಿತಾತ್ಮಕ ಬದಲಾವಣೆಗಳು ಶುರುವಾಗಿವೆ. ಇದರ ಭಾಗವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್ಪಿ) ಅರುಣ್ ಕೆ. ಅವರನ್ನು ಬೇರೆಡೆಗೆ ವರ್ಗಾಯಿಸಲಾಗುತ್ತದೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ಬೆಳವಣಿಗೆಯು ಕರಾವಳಿ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.
ದಕ್ಷ ಅಧಿಕಾರಿಗಳ ವರ್ಗಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ನಾಗರಿಕರು, “ಕಮಿಷನರ್ ವರ್ಗಾವಣೆ ಬೇಡ, ಅವರು ಮಂಗಳೂರಿನ ಸೌಹಾರ್ದತೆ ಮತ್ತು ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಅವರ ಜನಪರ ಕೆಲಸಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ” ಎಂದು ಒಕ್ಕೊರಲಿನಿಂದ ಸಾರುತ್ತಿದ್ದಾರೆ. ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣ ಮುಂದುವರಿಯಬೇಕಾದರೆ ಈ ಇಬ್ಬರೂ ಅಧಿಕಾರಿಗಳು ಇಲ್ಲೇ ಮುಂದುವರಿಯಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ತಮ್ಮ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









