ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ವಸಂತ್ ಅಮೀನ್ ಎಂಬುವವರ ಪುತ್ರ ಮೋಕ್ಷ ಎಂಬ ಬಾಲಕ ಕೋವಿಯಿಂದ ಹಾರಿದ ಗುಂಡು ತಗುಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಯಾಗಿದ್ದ ಮೋಕ್ಷ ಹಾಗೂ ಆತನ ತಂದೆ ವಸಂತ್ ಅಮೀನ್ ನಡುವೆ ಮನೆಯಲ್ಲಿ ತೀವ್ರ ಸ್ವರೂಪದ ಜಗಳ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಘರ್ಷದ ವೇಳೆ ಮನೆಯಲ್ಲಿದ್ದ ಕೋವಿಯಿಂದ ಗುಂಡು ಹಾರಿದ್ದು, ಅದು ಬಾಲಕನಿಗೆ ತಗುಲಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಬಾಲಕ ತಾನೇ ಶೂಟ್ ಮಾಡಿಕೊಂಡಿದ್ದಾನೆಯೇ ಅಥವಾ ತಂದೆಯೇ ಗುಂಡು ಹಾರಿಸಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದೇ ಘಟನೆಯಲ್ಲಿ ತಂದೆ ವಸಂತ್ ಅಮೀನ್ ಅವರಿಗೂ ಚೂರಿಯಿಂದ ಇರಿದ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿ ನಡೆದ ಈ ಹಿಂಸಾತ್ಮಕ ಸಂಘರ್ಷಕ್ಕೆ ನಿಖರವಾದ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕಡಬ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ. ಕೌಟುಂಬಿಕ ಕಲಹವೊಂದು ಇಷ್ಟೊಂದು ವಿಕೋಪಕ್ಕೆ ಹೋಗಿ ಬಾಲಕನ ಪ್ರಾಣವನ್ನೇ ಬಲಿಪಡೆದ ಈ ಘಟನೆಯು ರಾಮಕುಂಜ ಗ್ರಾಮದಲ್ಲಿ ಭೀತಿ ಮತ್ತು ಶೋಕದ ವಾತಾವರಣವನ್ನು ನಿರ್ಮಿಸಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಘಟನೆ ನಡೆದ ಸಮಯದಲ್ಲಿ ತಂದೆ ಮತ್ತು ಮಗನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಬಾಲಕನ ಸಾವಿಗೆ ತಗುಲಿದ ಗುಂಡು ಆಕಸ್ಮಿಕವಾಗಿ ಹಾರಿದ್ದೇ ಅಥವಾ ಉದ್ದೇಶಪೂರ್ವಕ ಕೃತ್ಯವೇ ಎಂಬ ನಿಗೂಢತೆಯನ್ನು ಭೇದಿಸಲು ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ತಂಡದ ವರದಿಗಾಗಿ ಕಾಯಲಾಗುತ್ತಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆಯ ಹೇಳಿಕೆಯನ್ನು ಪಡೆದ ನಂತರ ಘಟನೆಯ ಪೂರ್ಣ ಚಿತ್ರಣ ಲಭ್ಯವಾಗುವ ಸಾಧ್ಯತೆಯಿದೆ. ಕಡಬ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ದುಖಾಂತ ಸುದ್ದಿಗಳು, ಸುದ್ದಿಗಳು









