ಬೆಳ್ತಂಗಡಿ : ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಯುವತಿಯೊಬ್ಬಳು ತನ್ನ ಮನೆಯ ಕೋಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಮನನೊಂದ ಘಟನೆ ಮಂಗಳವಾರ ಮುಂಜಾನೆ ಕೊಕ್ಕಡ ಗ್ರಾಮದ ಹಳ್ಳಿಂಗೇರಿಯಲ್ಲಿ ಸಂಭವಿಸಿದೆ. ಮೃತ ವಿದ್ಯಾರ್ಥಿನಿಯನ್ನು ಮೂಲತಃ ಧಾರವಾಡ ಜಿಲ್ಲೆಯ ಹಿರೇಗುಂಜಲ್-ಚಿಕ್ಕಗುಂಜಲ್ ನಿವಾಸಿಯಾಗಿದ್ದ ರಮೇಶ್ ಎಂಬುವವರ ಪುತ್ರಿ ಶ್ವೇತಾ (18) ಎಂದು ಗುರುತಿಸಲಾಗಿದೆ. ಈ ಕುಟುಂಬವು ಕಳೆದ ಐದು ವರ್ಷಗಳಿಂದ ಕೊಕ್ಕಡದ ಹಳ್ಳಿಂಗೇರಿ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು, ಕೂಲಿ ಕೆಲಸ ಮಾಡುತ್ತಾ ಬದುಕು ಸಾಗಿಸುತ್ತಿತ್ತು.
ಮಂಗಳವಾರ ಎಂದಿನಂತೆ ಬೆಳಗ್ಗೆ ಎದ್ದಿದ್ದ ಶ್ವೇತಾ ಕಾಲೇಜಿಗೆ ಹೋಗಲು ತಯಾರಾಗುತ್ತಿದ್ದಳು ಎನ್ನಲಾಗಿದೆ. ಆ ಸಮಯದಲ್ಲಿ ಆಕೆಯ ತಂದೆ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದರು ಮತ್ತು ತಾಯಿ ಮಾತ್ರ ಮನೆಯಲ್ಲಿದ್ದರು. ತಾಯಿ ಬೇರೆ ಕೆಲಸದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಕೋಣೆಗೆ ತೆರಳಿದ ಶ್ವೇತಾ, ಅಲ್ಲಿ ಒಂಟಿಯಾಗಿ ನೇಣು ಬಿಗಿದುಕೊಂಡಿದ್ದಾಳೆ. ತಡವಾಗಿ ಗಮನಿಸಿದಾಗ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿರುವುದು ಬೆಳಕಿಗೆ ಬಂದಿದೆ.
ವಿದ್ಯಾಭ್ಯಾಸದಲ್ಲಿ ತೊಡಗಿದ್ದ ಈಕೆ ಹಠಾತ್ತನೆ ಇಂತಹ ತೀವ್ರ ನಿರ್ಧಾರ ತೆಗೆದುಕೊಳ್ಳಲು ಇರುವ ನಿಖರವಾದ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣೆಯ ಪೊಲೀಸರು ಭೇಟಿ ನೀಡಿ ಮೃತದೇಹದ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಸಾವಿನ ಹಿಂದಿನ ರಹಸ್ಯವನ್ನು ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









