ಮಂಗಳೂರು : ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿ ನಂತರ ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ಮರಣ ನಂತರ ಜಮೆಯಾದ ಸಹಾಯಧನ ಹಣವನ್ನು ಮರಳಿ ಸರ್ಕಾರಕ್ಕೆ ಹಿಂದಿರುಗಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಆಯಾಯ ತಾಲೂಕು ಗ್ಯಾರಂಟಿ ಅಧ್ಯಕ್ಷರು ಸಮಗ್ರವಾಗಿ ಪರಿಶೀಲನೆ ನಡೆಸಬೇಕು ಎಂದು ದ.ಕ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದರು.
ಅವರು ಮಂಗಳವಾರ ದ.ಕ ಜಿಲ್ಲಾ ಪಂಚಾಯತ್ನಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಮರಣ ಹೊಂದಿದ 3477 ಫಲಾನುಭವಿಗಳಿಗೆ ರೂ. 3.34 ಕೋಟಿ ಜಮೆಯಾಗಿರುವ ಬಗ್ಗೆ ಕೇಂದ್ರ ಕಚೇರಿಯಿಂದ ಮಾಹಿತಿ ಬಂದಿದೆ. ಮರಣ ಹೊಂದಿದ ಫಲಾನುಭವಿಗಳಿಗೆ ಹಣ ಜಮೆಯಾಗುವುದನ್ನು ತಡೆದರೆ ಸರ್ಕಾರದ ಹಣ ಪೋಲಾಗದಂತೆ ಮಾಡಬಹುದು ಎಂದು ಅವರು ಹೇಳಿದರು.
ಮೃತಪಟ್ಟ ಫಲಾನುಭವಿಗಳನ್ನು ಗೃಹಲಕ್ಷ್ಮಿ ಯೋಜನೆಯ ಪಟ್ಟಿಯಿಂದ ತೆಗೆಯಲು ಇಲಾಖಾ ವತಿಯಿಂದ ಸೂಕ್ತ ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.
ಅನ್ನಭಾಗ್ಯ ಯೋಜನೆಯಡಿ ಅರ್ಕುಳದಲ್ಲಿ ಪಡಿತರ ಅಂಗಡಿ ತೆರೆಯುವ ಬಗ್ಗೆ ಸಮಸ್ಯೆ ಬಗೆಹರಿಯದೆ ಇದ್ದು, ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ವಿಚಾರಿಸಿದರು. ಇಂತಹ ಸಮಸ್ಯೆಗಳ ಬಗ್ಗೆ ಆದ್ಯತೆ ಮೇರೆಗೆ ತುರ್ತಾಗಿ ಕ್ರಮವಹಿಸಬೇಕೆಂದು ಭರತ್ ಮುಂಡೋಡಿ ಸೂಚಿಸಿದರು.
ಪಡಿತರ ವಿತರಣೆ ಮಾಡುವಾಗ ಸರಬರಾಜುದಾರರು ಬೇಕಾಬಿಟ್ಟಿಯಾಗಿ ಅಕ್ಕಿಯನ್ನು ವಿತರಣೆ ಮಾಡದೇ ಬಹಳ ಎಚ್ಚರಿಕೆಯಿಂದ ಅಕ್ಕಿಯನ್ನು ವಿತರಣೆ ಮಾಡುವ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಅಧ್ಯಕ್ಷರು ಸೂಚಿಸಿದರು.
ಸಾರ್ವಜನಿಕರು ಬಸ್ಸಿನಲ್ಲಿ ಪ್ರಯಾಣಿಸುವಾಗ ಅವರಿಗೆ ಗೌರವ ನೀಡುವ ಬಗ್ಗೆ ಚಾಲಕರು/ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಬೇಕು. ಪ್ರಥಮ ಬಾರಿಗೆ ನೇಮಕಾತಿಯಾಗುವ ಚಾಲಕರು/ ಸಿಬ್ಬಂದಿಯವರಿಗೆ ಸಾರ್ವಜನಿಕ ಸೇವೆಯ ಬಗ್ಗೆ ತರಬೇತಿ ನೀಡಿ, ಸಾರ್ವಜನಿಕರಿಗೆ ನೀಡಬೇಕಾದ ಗೌರವದ ಬಗ್ಗೆ ತಿಳಿಸಿಕೊಡಬೇಕೆಂದು ಅಧ್ಯಕ್ಷರು ಸೂಚಿಸಿದರು.
2 ವರ್ಷಗಳಿಂದ ಯುವನಿಧಿಯಡಿ ಸಹಾಯಧನ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಯುವನಿಧಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 7,734 ನೋಂದಣಿಯಾಗಿದ್ದು, 6179 ಡಿ.ಬಿ.ಟಿ ಪಾವತಿಯಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಸುಷ್ಮಾ ಕೆ. ಎಸ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಜೋಕಿಂ ಡಿಸೋಜಾ, ಶೇಖರ್ ಕುಕ್ಕೇಡಿ, ಸುರೇಖಾ ಚಂದ್ರಹಾಸ್, ನಾರಾಯಣ ನಾಯಕ್, ಸದಸ್ಯರಾದ ಸುರೇಂದ್ರ ಕಂಬಳಿ, ಆಲಿಸ್ಟನ್ ಕ್ಲೈವ್ ಡಿಕುನ್ಹಾ, ಅರುಣ್ ಕುಮಾರ್ ಶೆಟ್ಟಿ, ಆಲ್ವಿನ್ ಕ್ಲೆಮೆಂಟ್ ಕುಟಿನ್ಹ, ಜಯಂತಿ ಬಿಎ, ಶಾಹುಲ್ ಹಮೀದ್, ಉಮಾನಾಥ್ ಶೆಟ್ಟಿ, ಪದ್ಮನಾಭ ಸಾಲ್ಯಾನ್, ಸುಧೀರ್ ಕುಮಾರ್ ಶೆಟ್ಟಿ , ಎಸ್.ರಫೀಕ್, ಶಾಂತಲಾ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









