ಮಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಭರ್ಜರಿ ಮೇಜರ್ ಸರ್ಜರಿ ನಡೆಸಿರುವ ರಾಜ್ಯ ಸರ್ಕಾರ, ಒಟ್ಟು 31 ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಬುಧವಾರ ಅಧಿಕೃತ ಆದೇಶ ಹೊರಡಿಸಿದೆ.
ಕರಾವಳಿ ಭಾಗದ ಪೊಲೀಸ್ ಆಡಳಿತದಲ್ಲಿ ಪ್ರಮುಖ ಬದಲಾವಣೆಯಾಗಿದ್ದು, ಹುದ್ದೆಯ ನಿರೀಕ್ಷಣೆಯಲ್ಲಿದ್ದ ಎನ್. ಶಶಿಕುಮಾರ್ ಅವರನ್ನು ಮಂಗಳೂರಿನ ಪಶ್ಚಿಮ ವಲಯದ ನೂತನ ಪೊಲೀಸ್ ಮಹಾನಿರೀಕ್ಷಕರಾಗಿ (ಐಜಿಪಿ) ನಿಯೋಜಿಸಲಾಗಿದೆ. ಇವರು ಈ ಹಿಂದೆ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ. ಮತ್ತೊಂದೆಡೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ (ಎಡಿಜಿಪಿ) ಆರ್. ಹಿತೇಂದ್ರ ಅವರನ್ನು ರಾಜಧಾನಿ ಬೆಂಗಳೂರು ನಗರದ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ನೇಮಿಸಲಾಗಿದೆ.
ಇಲ್ಲಿಯವರೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಎಡಿಜಿಪಿ ಹುದ್ದೆಗೆ ವರ್ಗಾಯಿಸಲಾಗಿದೆ.
ಬೆಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯನ್ನು ಮತ್ತಷ್ಟು ಚುರುಕುಗೊಳಿಸುವ ಉದ್ದೇಶದಿಂದ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊಸದಾಗಿ ಸೃಷ್ಟಿಸಲಾದ ವಲಯವಾರು ಆಯುಕ್ತರ ಹುದ್ದೆಗಳಿಗೆ ಹಿರಿಯ ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅದರಂತೆ, ಹೇಮಂತ್ ಎಂ. ನಿಂಬಾಳ್ಕರ್ ಅವರನ್ನು ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸ್ ಆಯುಕ್ತರನ್ನಾಗಿ (ಮೇಲ್ದರ್ಜೆಗೇರಿಸಲಾದ ರೌಡಿ ನಿಗ್ರಹ ದಳದ ಆಯುಕ್ತರ ಹೆಚ್ಚುವರಿ ಹೊಣೆಗಾರಿಕೆಯೊಂದಿಗೆ) ನೇಮಿಸಲಾಗಿದೆ. ಹೊಸದಾಗಿ ಸೃಷ್ಟಿಸಲಾದ ಹುದ್ದೆಗಳಿಗೆ ಕೇಂದ್ರ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಲಾಭು ರಾಮ್, ಪೂರ್ವ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಡಾ. ಪಿ. ಎಸ್. ಹರ್ಷ, ಪಶ್ಚಿಮ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ವಿಕಾಸ್ ಕುಮಾರ್ ವಿಕಾಸ್ ಹಾಗೂ ಉತ್ತರ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಡಾ. ಎಂ. ಬಿ. ಬೋರಲಿಂಗಯ್ಯ ಅವರನ್ನು ನೇಮಿಸಲಾಗಿದೆ. ಅಲ್ಲದೆ, ಸಿ. ವಂಶಿ ಕೃಷ್ಣ ಅವರನ್ನು ಬೆಂಗಳೂರು ನಗರ ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿ, ನೂತನವಾಗಿ ಸೃಷ್ಟಿಸಲಾದ ದಕ್ಷಿಣ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹೆಚ್ಚುವರಿ ಜವಾಬ್ದಾರಿಯನ್ನೂ ವಹಿಸಲಾಗಿದೆ.
ಇನ್ನು ರಾಜ್ಯದ ವಿವಿಧ ವಿಭಾಗಗಳ ಉನ್ನತ ಹುದ್ದೆಗಳಿಗೂ ವರ್ಗಾವಣೆ ಭಾಗ್ಯ ದೊರೆತಿದ್ದು, ಈ ಹಿಂದೆ ಸಿಐಡಿಯಲ್ಲಿದ್ದ ಬಿಜಯ್ ಕುಮಾರ್ ಸಿಂಗ್ ಅವರನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ ನೇಮಿಸಲಾಗಿದೆ. ಎಸ್. ಮುರುಗನ್ ಅವರನ್ನು ಲೋಕಾಯುಕ್ತ ಎಡಿಜಿಪಿಯಾಗಿ ಹಾಗೂ ಮನೀಶ್ ಖರ್ಬಿಕರ್ ಅವರನ್ನು ಬೆಂಗಳೂರಿನ ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ ವಿಭಾಗದ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ. ಅನುಪಮ್ ಅಗರವಾಲ್ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್ಆರ್ಪಿ) ಐಜಿಪಿಯಾಗಿ, ಈ ಹಿಂದೆ ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿದ್ದ ಡಾ. ಶರಣಪ್ಪ ಎಸ್. ಡಿ ಅವರನ್ನು ರೈಲ್ವೆ ವಿಭಾಗದ ಡಿಐಜಿಪಿಯಾಗಿ ಮತ್ತು ಕುಲದೀಪ್ ಕುಮಾರ್ ಆರ್. ಜೈನ್ ಅವರನ್ನು ಡಿಐಜಿಪಿ ಹಾಗೂ ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿ ನಿಯೋಜಿಸಲಾಗಿದೆ. ಜೊತೆಗೆ ಎಂ. ಪುಟ್ಟಮಾದಯ್ಯ ಅವರನ್ನು ಮೈಸೂರಿನ ದಕ್ಷಿಣ ವಲಯ ಡಿಐಜಿಪಿಯಾಗಿ, ಡಾ. ಎಂ. ಅಶ್ವಿನಿ ಅವರನ್ನು ಬೆಂಗಳೂರಿನ ನೇಮಕಾತಿ ವಿಭಾಗದ ಡಿಐಜಿಪಿಯಾಗಿ ಹಾಗೂ ಜೆ. ಕೆ. ರಶ್ಮಿ ಅವರನ್ನು ಜಲಸಂಪನ್ಮೂಲ ಇಲಾಖೆಯ ಜಾಗೃತ ದಳದ ಡಿಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಡಿಸಿಪಿ ಮಟ್ಟದಲ್ಲೂ ವ್ಯಾಪಕ ಬದಲಾವಣೆಗಳನ್ನು ತರಲಾಗಿದ್ದು, ಪೂರ್ವ ಬೆಂಗಳೂರು ನಗರ ಸಂಚಾರ ಡಿಸಿಪಿಯಾಗಿ ಡಾ. ಅನೂಪ್ ಎ. ಶೆಟ್ಟಿ, ಕೇಂದ್ರ ಬೆಂಗಳೂರು ಕೇಂದ್ರ ಕಚೇರಿಯ ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿಯಾಗಿ ಲಕ್ಷ್ಮಣ ನಿಂಬರಗಿ, ಕೇಂದ್ರ ಬೆಂಗಳೂರು ನಗರದ ಇಂದಿರಾನಗರ ಡಿಸಿಪಿಯಾಗಿ ಚನ್ನಬಸವಣ್ಣ ಲಂಗೋಟಿ, ಉತ್ತರ ಬೆಂಗಳೂರು ನಗರದ ಯಶವಂತಪುರ ಡಿಸಿಪಿಯಾಗಿ ನಾಗೇಶ್ ಡಿ. ಎಲ್, ಕೇಂದ್ರ ಬೆಂಗಳೂರು ನಗರದ ಸಂಚಾರ ಡಿಸಿಪಿಯಾಗಿ ಲೋಕೇಶ್ ಭರಮಪ್ಪ ಜಗಲಾಸರ್, ಪಶ್ಚಿಮ ಬೆಂಗಳೂರು ನಗರದ ಕೆಂಗೇರಿ (ನೈಋತ್ಯ) ಡಿಸಿಪಿಯಾಗಿ ಯತೀಶ್ ಎನ್ ಹಾಗೂ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಎಸ್ಪಿಯಾಗಿ ಸೈದುಲು ಅಡಾವತ್ ಅವರನ್ನು ನೇಮಿಸಲಾಗಿದೆ. ಅದೇ ರೀತಿ ಪೂರ್ವ ಬೆಂಗಳೂರು ನಗರದ ವೈಟ್ಫೀಲ್ಡ್ ಡಿಸಿಪಿಯಾಗಿ ಶ್ರೀಹರಿ ಬಾಬು ಬಿ. ಎಲ್, ಪೂರ್ವ ಬೆಂಗಳೂರು ನಗರ ಡಿಸಿಪಿಯಾಗಿ ಡಾ. ಗೀತಾ ಎಂ. ಎಸ್, ಬೆಂಗಳೂರು ನಗರ ಆಡಳಿತ ಡಿಸಿಪಿಯಾಗಿ ರಂಜಿತ್ ಕುಮಾರ್ ಬಂಡಾರು, ಪಶ್ಚಿಮ ಬೆಂಗಳೂರು ನಗರದ ಪೀಣ್ಯ ಡಿಸಿಪಿಯಾಗಿ ಅಶೋಕ್ ಕೆ. ವಿ, ಉತ್ತರ ಬೆಂಗಳೂರು ನಗರ ಡಿಸಿಪಿಯಾಗಿ ಅಮಟೆ ವಿಕ್ರಮ್, ಕೇಂದ್ರ ಬೆಂಗಳೂರು ನಗರದ ಗಾಂಧಿನಗರ ಡಿಸಿಪಿಯಾಗಿ ಲಕ್ಷ್ಮಿ ಗಣೇಶ್ ಕೆ ಮತ್ತು ಪಶ್ಚಿಮ ಬೆಂಗಳೂರು ನಗರದ ಸಂಚಾರ ಡಿಸಿಪಿಯಾಗಿ ಪಿ. ವಿ. ಸ್ನೇಹಾ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









