
ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಕರಾವಳಿಯ ಸಾಂಪ್ರದಾಯಿಕ ಕ್ರೀಡಾ ಒಕ್ಕೂಟವಾದ ‘ಜಿಲ್ಲಾ ಕಂಬಳ ಸಮಿತಿ’ಯ ಮಹತ್ವದ ಸಭೆಯು ಮೂಡುಬಿದಿರೆಯಲ್ಲಿ ಭಾನುವಾರ ಜರುಗಿತು. ಈ ಸಭೆಯಲ್ಲಿ ಮುಂದಿನ ಅವಧಿಗೆ ಸಮಿತಿಯ ನೂತನ ಅಧ್ಯಕ್ಷರಾಗಿ ಮೂಡುಬಿದಿರೆ ಹೊಸಬೆಟ್ಟು ಮೂಲದ ಪ್ರಮುಖರಾದ ಚಂದ್ರಹಾಸ ಸಾಧು ಸನಿಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕಂಬಳ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ 2026-27ನೇ ಸಾಲಿನ ಅಧಿಕೃತ ಕಂಬಳ ಕೂಟಗಳ ದಿನಾಂಕಗಳನ್ನು ಬಿಡುಗಡೆಗೊಳಿಸಲಾಯಿತು. ಈ ಬಾರಿಯ ಸೀಸನ್ನ ಅತ್ಯಂತ ವಿಶೇಷ ಆಕರ್ಷಣೆಯೆಂದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲೇ ಈ ಜಾನಪದ ಕ್ರೀಡೆ ಸಾಂಸ್ಕೃತಿಕ ರಾಜಧಾನಿಯ ಮಣ್ಣಿನಲ್ಲಿ ಧೂಳೆಬ್ಬಿಸಲಿದೆ.
ಪ್ರಕಟಿತ ವೇಳಾಪಟ್ಟಿಯಂತೆ, ಅಕ್ಟೋಬರ್ 11 ಅಥವಾ 17 ರಂದು ಮೈಸೂರಿನಲ್ಲಿ ಸೀಸನ್ನ ಮೊದಲ ಕಂಬಳ ಜರುಗಲಿದ್ದು, ಆ ಬಳಿಕ ನವೆಂಬರ್ನಿಂದ ಮುಂದಿನ ವರ್ಷದ ಏಪ್ರಿಲ್ವರೆಗೆ ಕರಾವಳಿಯ ವಿವಿಧೆಡೆ ಸರಣಿ ಕೂಟಗಳು ಸಾಗಲಿವೆ. ನವೆಂಬರ್ ತಿಂಗಳಲ್ಲಿ ಪಣಿಪಿಲ (ನ 7), ಸಾಣೂರು (ನ.14), ಕೊಡಂಗೆ (ನ.21) ಹಾಗೂ ಕಕ್ಯಪದವು (ನ.28) ಕಂಬಳಗಳು ನಡೆಯಲಿವೆ. ಡಿಸೆಂಬರ್ನಲ್ಲಿ ಹೊಕ್ಕಾಡಿಗೋಳಿ (ಡಿ.5), ಬಾರಾಡಿಬೀಡು (ಡಿ.12), ಮೂಲ್ಕಿ (ಡಿ.26) ಮತ್ತು ಬಳ್ಳಮಂಜ (ಡಿ.27) ಭಾಗದ ಕೆಸರುಗದ್ದೆಗಳಲ್ಲಿ ಜಾನಪದ ಕ್ರೀಡಾ ಹಬ್ಬ ಅನಾವರಣಗೊಳ್ಳಲಿದೆ.
ಮುಂದಿನ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ಮಿಯ್ಯಾರು (ಜ.2), ನರಿಂಗಾನ (ಜ.9), ಅಡ್ಡೆ (ಜ.16), ಮೂಡುಬಿದಿರೆ (ಜ.23) ಮತ್ತು ಪುತ್ತೂರು (ಜ.30) ಕಂಬಳಗಳು ನಿಗದಿಯಾಗಿವೆ. ಫೆಬ್ರವರಿಯಲ್ಲಿ ಐಕಳ (ಫೆ.6), ಜಪ್ಪಿನಮೊಗರು (ಫೆ.13), ವಾಮಂಜೂರು (ಫೆ.20) ಹಾಗೂ ಎರ್ಮಾಳ್ (ಫೆ.27) ಕೂಟಗಳು ಜರುಗಲಿದ್ದರೆ, ಮಾರ್ಚ್ನಲ್ಲಿ ಬಂಟ್ವಾಳ (ಮಾ.6), ಬಂಗಾಡಿ (ಮಾ.13), ವೇಣೂರು (ಮಾ.20) ಮತ್ತು ಉಪ್ಪಿನಂಗಡಿ (ಮಾ.27) ಕಂಬಳಗಳು ಸಾಲುಸಾಲಾಗಿ ನಡೆಯಲಿವೆ. ಸೀಸನ್ನ ಕೊನೆಯ ಹಂತದಲ್ಲಿ ಏಪ್ರಿಲ್ ತಿಂಗಳಲ್ಲಿ ಗುರುಪುರ (ಏ.3), ಬಳಕುಂಜೆ (ಏ.10), ಹರೇಕಳ (ಏ.17) ಮತ್ತು ಅಂತಿಮವಾಗಿ ಬಡಗಬೆಟ್ಟು (ಏ.24) ಕಂಬಳದೊಂದಿಗೆ ಈ ಕ್ರೀಡಾ ಸರಣಿ ಮುಕ್ತಾಯಗೊಳ್ಳಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









