ಉಡುಪಿ : ಹಿರಿಯಡ್ಕ ಸಮೀಪದ ಪೆರ್ಡೂರು ಪದ್ಮಕಮಲ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿದ ಆರೋಪದಡಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಗಂಧಿ ಮತ್ತು ಆಕೆಯ ಪತಿ ಸಂತೋಷ ಬಂಧಿತ ಆರೋಪಿಗಳಾಗಿದ್ದಾರೆ.
ಒಕ್ಕೂಟದಲ್ಲಿ ಮುಖ್ಯ ಪುಸ್ತಕ ಬರಹಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಸುಗಂಧಿ, 2023ರಿಂದ 2025ರ ಅವಧಿಯಲ್ಲಿ ಸದಸ್ಯರು ಮರುಪಾವತಿಸಿದ ಸಾಲದ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡದೆ ವಂಚನೆ ಎಸಗಿದ್ದಾರೆ. ವಿವಿಧ ಸಂಘಗಳ ಹೆಸರಿನಲ್ಲಿ ಒಕ್ಕೂಟದ ಚೆಕ್ಗಳಿಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರ ಸಹಿಯನ್ನು ನಕಲಿ ಮಾಡಿ, ಹಣವನ್ನು ವೈಯಕ್ತಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಲೆಕ್ಕಪರಿಶೋಧನೆಯ ವೇಳೆ ಅಕ್ರಮ ಬಯಲಾಗದಂತೆ ತಡೆಯಲು ಸುಗಂಧಿ ದ್ವಿಮುಖ ಲೆಕ್ಕ ಪತ್ರಗಳನ್ನು ನಿರ್ವಹಿಸುತ್ತಿದ್ದಳು. ಕಾರ್ಯಕಾರಿ ಸಮಿತಿಗೆ ಅನುಮಾನ ಬಾರದ ರೀತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಒಕ್ಕೂಟದ ಒಟ್ಟು 23 ಲಕ್ಷ ರೂಪಾಯಿ ಹಣವನ್ನು ದಂಪತಿ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಅಕ್ರಮದ ಕುರಿತಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಅವರ ನಿರ್ದೇಶನ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪೀಕೃಷ್ಣ ಅವರ ಮಾರ್ಗದರ್ಶನದಲ್ಲಿ ಹಿರಿಯಡ್ಕ ಪೊಲೀಸರ ತಂಡ ತನಿಖೆ ಕೈಗೊಂಡು, ಜುಲೈ 6ರಂದು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಿದೆ.
ಆರೋಪಿಗಳಿಬ್ಬರೂ ಸೇರಿಕೊಂಡು ನಕಲಿ ಸಹಿ ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










