ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಬೌದ್ಧಿಕ ಬೆಳವಣಿಗೆಗಾಗಿ ನಿರಂತರವಾಗಿ ಸಾಹಿತ್ಯಿಕ ಸಮ್ಮೇಳನ ಹಾಗೂ ದತ್ತಿ ಉಪನ್ಯಾಸಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ಕಸಾಪ ವ್ಯಾಪ್ತಿಯಲ್ಲಿರುವ ಒಟ್ಟು 32 ದತ್ತಿ ನಿಧಿಗಳ ಪೈಕಿ ಅತಿ ಹೆಚ್ಚು ಅಂದರೆ 12 ದತ್ತಿಗಳು ಬಂಟ್ವಾಳ ತಾಲೂಕಿನಲ್ಲೇ ಇರುವುದು ವಿಶೇಷ. ಈ ದತ್ತಿ ಯೋಜನೆಗಳ ಪ್ರಯೋಜನವನ್ನು ಕಾಲೇಜು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ತಿಳಿಸಿದರು. ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತುಂಬೆ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ನಡೆದ ವಿವಿಧ ದತ್ತಿ ಉಪನ್ಯಾಸಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ಸಾಹಿತ್ಯ ಮತ್ತು ಸಮಾಜದ ವಿವಿಧ ಆಯಾಮಗಳ ಕುರಿತು ಬೆಳಕು ಚೆಲ್ಲಿದರು. ವಿಶ್ರಾಂತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಅವರು “ಕನ್ನಡ ಕಾವ್ಯಗಳ ಮೇಲೆ ಸಂಸ್ಕೃತದ ಪ್ರಭಾವ” ಎಂಬ ವಿಷಯದ ಕುರಿತು ಮಾತನಾಡಿ, ರಾಮಾಯಣ, ಮಹಾಭಾರತ ಕಾಲದಿಂದಲೂ ಕನ್ನಡದ ಗದ್ಯ-ಪದ್ಯ, ಕಥಾವಸ್ತು ಹಾಗೂ ವ್ಯಾಕರಣದ ಮೇಲೆ ಸಂಸ್ಕೃತ ಭಾಷೆಯ ಗಾಢವಾದ ಪ್ರಭಾವ ಹಾಸುಹೊಕ್ಕಾಗಿದೆ ಎಂದರು. “ಸಂಸ್ಕಾರ ಸಮಾಜ” ವಿಷಯದ ಕುರಿತು ಮಾತನಾಡಿದ ಕವಯತ್ರಿ ರಜನಿ ಚಿಕ್ಕಯಮಠ, ಸಂಸ್ಕಾರವು ಬದುಕಿನ ಕೈಗನ್ನಡಿಯಾಗಿದ್ದು, ಹಿರಿಯರು ಹಾಕಿಕೊಟ್ಟ ಈ ಚೌಕಟ್ಟನ್ನು ಯುವ ಪೀಳಿಗೆ ಉಳಿಸಬೇಕಾಗಿದೆ ಎಂದು ಕರೆ ನೀಡಿದರು. ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ, ಮೆಲ್ಕಾರ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಮಜೀದ್ ಎಸ್., “ಜಾತ್ಯತೀತ ಸಮಾಜ ನಿರ್ವಹಣೆ” ವಿಷಯದ ಬಗ್ಗೆ ಮಾತನಾಡಿ, ಜಾತಿ-ಧರ್ಮಗಳ ಭೇದಭಾವವಿಲ್ಲದ, ಮೇಲು-ಕೀಳಿನ ಮುಕ್ತ ವಾತಾವರಣ ಕಲ್ಪಿಸುವ ಏಕೈಕ ಶಕ್ತಿ ಸಾಹಿತ್ಯಕ್ಕಿದೆ ಎಂದು ಅಭಿಪ್ರಾಯಪಟ್ಟರು.
ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿ.ಸು. ಭಟ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಹಜಾಜ್ ಗ್ರೂಪ್ ಆಫ್ ಇಂಡಸ್ಟ್ರೀಸ್ನ ವ್ಯವಸ್ಥಾಪಕ ನಿರ್ದೇಶಕ ಹನೀಫ್ ಹಾಜಿ ಅವರು ತಮ್ಮ ತಂದೆಯ ಸ್ಮರಣಾರ್ಥ ನಡೆಯುತ್ತಿರುವ ಈ ದತ್ತಿ ಕಾರ್ಯಕ್ರಮದ ಬಗ್ಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಉಪನ್ಯಾಸಕಿ ಪ್ರಫುಲ್ಲ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ವೇದಿಕೆಯಲ್ಲಿ ಬಂಟ್ವಾಳ ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಸಾಯಿರಾಂ ಜೆ. ನಾಯಕ್ ಕೆ., ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್ನ ಅಬ್ದುಲ್ ಕಬೀರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾಲೇಜಿನ ಉಪ ಪ್ರಾಂಶುಪಾಲ ದಿನೇಶ ಶೆಟ್ಟಿ ಅಳಿಕೆ ಸ್ವಾಗತಿಸಿದರೆ, ಬಂಟ್ವಾಳ ಕಸಾಪ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಡಿ.ಬಿ. ವಂದನಾರ್ಪಣೆ ಮಾಡಿದರು. ಇತಿಹಾಸ ಉಪನ್ಯಾಸಕ ಶರತ್ ಆಳ್ವ ಚನಿಲ ಇಡೀ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಅಶೋಕ್ ಸಹಕರಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು










