ಧರ್ಮಸ್ಥಳ : ಪವಿತ್ರ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕೀರ್ತಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ವ್ಯವಸ್ಥಿತ ಷಡ್ಯಂತ್ರ ಮತ್ತು ಸುಳ್ಳು ವದಂತಿಗಳನ್ನು ಹರಡುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಬೆಂಗಳೂರಿನ ‘ಅತಿ ಹಿಂದುಳಿದ ಮಠಾಧೀಶರ ಮಹಾಸಭಾ’, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ಮಹಾಸಭಾದ ಪ್ರಮುಖರಾದ ಡಾ. ಪ್ರಣವಾನಂದ ರಾವ್ ಮಹಾಸ್ವಾಮೀಜಿ ಅವರ ನೇತೃತ್ವದ ಏಳು ಮಂದಿ ಕೋರ್ ಕಮಿಟಿ ಸದಸ್ಯರ ನಿಯೋಗವು ಶುಕ್ರವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಪೂಜ್ಯ ಹೆಗ್ಗಡೆಯವರಿಗೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸುವ ಅಧಿಕೃತ ಪತ್ರವನ್ನು ಹಸ್ತಾಂತರಿಸಿತು. ಜೂನ್ 27 ಮತ್ತು 28ರಂದು ಕಲಬುರಗಿಯಲ್ಲಿ ಜರುಗಿದ ಚಿಂತನಾ ಸಭೆಯ ನಿರ್ಣಯದಂತೆ, ಕ್ಷೇತ್ರದ ಪಾವಿತ್ರ್ಯತೆಯ ರಕ್ಷಣೆಗಾಗಿ ಪರಿಷತ್ತು ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಲಾಯಿತು. ಜೊತೆಗೆ, ಪೂಜ್ಯ ಹೆಗ್ಗಡೆಯವರಿಗೆ ದೇವರು ಆಯುರಾರೋಗ್ಯ ಕರುಣಿಸಿ ಅವರ ಲೋಕಕಲ್ಯಾಣ ಸೇವೆಗಳು ನಿರಂತರವಾಗಿ ಸಾಗಲಿ ಎಂದು ಸ್ವಾಮೀಜಿಗಳು ಹರಸಿದರು.
ಧರ್ಮಸ್ಥಳದ ವಿರುದ್ಧ ಕುತಂತ್ರ ರೂಪಿಸಿರುವ ಆರೋಪಿಗಳನ್ನು ಮಟ್ಟಹಾಕಲು ಶೀಘ್ರದಲ್ಲೇ ರಾಜ್ಯದ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ನಿಯೋಗದ ಮೂಲಕ ಒತ್ತಾಯ ತರಲಾಗುವುದು ಎಂದು ಡಾ. ಪ್ರಣವಾನಂದ ರಾವ್ ಮಹಾಸ್ವಾಮೀಜಿ ಅವರು ತಿಳಿಸಿದರು. ಇದರ ಮುಂದುವರಿದ ಭಾಗವಾಗಿ, ಕ್ಷೇತ್ರದ ಘನತೆಯನ್ನು ಎತ್ತಿಹಿಡಿಯಲು ಸುಮಾರು ಇನ್ನೂರು ಮಂದಿ ಮಠಾಧೀಶರ ನೇತೃತ್ವದಲ್ಲಿ ಸಾವಿರಾರು ಭಕ್ತರನ್ನು ಒಳಗೊಂಡ ಬೃಹತ್ ಪಾದಯಾತ್ರೆ ಹಾಗೂ ಭಕ್ತರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಯೋಜನೆಯ ಬಗ್ಗೆ ಧರ್ಮಾಧಿಕಾರಿಗಳೊಂದಿಗೆ ಪ್ರಾಥಮಿಕ ಚರ್ಚೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಪೂರ್ವಸಿದ್ಧತೆಗಳೊಂದಿಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಮಹಾಸಭಾದ ವತಿಯಿಂದ ಡಾ. ಹೆಗ್ಗಡೆಯವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ತದನಂತರ ನಿಯೋಗವು ಮಂಜುನಾಥ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಹಾಗೂ ಪ್ರಸಾದ ಸ್ವೀಕರಿಸಿದ ಬಳಿಕ ಬೆಂಗಳೂರಿಗೆ ತನ್ನ ಪ್ರಯಾಣವನ್ನು ಬೆಳೆಸಿತು.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










