
ಧರ್ಮಸ್ಥಳ : ತುಳುನಾಡಿನ ಪವಿತ್ರ ಪುಣ್ಯಕ್ಷೇತ್ರವಾದ ಧರ್ಮಸ್ಥಳಕ್ಕೆ ಶನಿವಾರ ಗಣ್ಯರ ದಂಡೇ ಹರಿದು ಬಂದಿದ್ದು, ರಾಜಕೀಯ ಹಾಗೂ ಚಲನಚಿತ್ರ ರಂಗದ ಪ್ರಮುಖರು ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಆಂಧ್ರಪ್ರದೇಶದ ಪ್ರಭಾವಿ ಸಂಸದರಾದ ಮಿಧುನ್ ರೆಡ್ಡಿ ಪಿ.ವಿ. ಅವರು ತಮ್ಮ ಇಡೀ ಕುಟುಂಬ ಸದಸ್ಯರೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ್ದರು. ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂಸದರು, ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಚರಣ ಸ್ಪರ್ಶ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಹೆಗ್ಗಡೆಯವರೊಂದಿಗೆ ಸಂಸದರು ಕೆಲಕಾಲ ಸೌಹಾರ್ದಯುತ ಹಾಗೂ ರಾಜಕೀಯೇತರ ವಿಷಯಗಳ ಕುರಿತು ಮುಕ್ತ ಮಾತುಕತೆ ನಡೆಸಿದರು. ಇದಾದ ಬಳಿಕ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು, ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜೆ ಹಾಗೂ ಸೇವೆಗಳನ್ನು ಸಲ್ಲಿಸಿದರು.
ಇದೇ ಸುದಿನದಂದು ಕನ್ನಡ ಚಿತ್ರರಂಗದ ಖ್ಯಾತ ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಸಹ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಶನಿವಾರ ಮುಂಜಾನೆ ಶ್ರೀ ಕ್ಷೇತ್ರಕ್ಕೆ ಬಂದಿಳಿದ ನಟ ಪ್ರಜ್ವಲ್, ಮೊದಲು ಮಂಜುನಾಥ ಸ್ವಾಮಿಯ ಗರ್ಭಗುಡಿಯ ಸನ್ನಿಧಿಗೆ ತೆರಳಿ ಭಕ್ತಿಯಿಂದ ದೇವರ ದರ್ಶನ ಪಡೆದರು ಮತ್ತು ವಿಶೇಷ ಮಂಗಳಾರತಿ ಸೇವೆಯಲ್ಲಿ ಪಾಲ್ಗೊಂಡರು. ದೇವರ ದರ್ಶನದ ನಂತರ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದ ನಟ ಪ್ರಜ್ವಲ್ ದೇವರಾಜ್, ಅವರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಹೆಗ್ಗಡೆಯವರು ಉಭಯ ಗಣ್ಯರಿಗೂ ಶಾಲು ಹೊದಿಸಿ ಮಂಜುನಾಥ ಸ್ವಾಮಿಯ ಪ್ರಸಾದ ನೀಡಿ ಭವಿಷ್ಯದ ದಿನಗಳಿಗೆ ಶುಭ ಹಾರೈಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










