ಸುರತ್ಕಲ್ : ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಮಠದ ಬಳಿ ರವಿವಾರ ತಡರಾತ್ರಿ ಭೀಕರ ಹಾಗೂ ಆಘಾತಕಾರಿ ಘಟನೆಯೊಂದು ನಡೆದಿದೆ. ಆಳವಾಗಿ ನಿದ್ರಿಸುತ್ತಿದ್ದ ಸ್ವಂತ ತಮ್ಮನ ತಲೆಗೆ ಕಲ್ಲು ಎತ್ತಿಹಾಕಿ ಕ್ರೂರವಾಗಿ ಕೊಲೆ ಮಾಡಿರುವ ಭೀಕರ ಕೃತ್ಯ ಬೆಳಕಿಗೆ ಬಂದಿದೆ. ಈ ದಾರುಣ ಘಟನೆಯಲ್ಲಿ ಮೃತಪಟ್ಟ ದುರ್ದೈವಿ ಯುವಕನನ್ನು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತೆಗ್ಯಾಳು ಗ್ರಾಮದ ನಿವಾಸಿ, ಪ್ರಸ್ತುತ ಚೊಕ್ಕಬೆಟ್ಟು ಮಠದ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಲ್ಲಿಕಾರ್ಜುನ (20) ಎಂದು ಗುರುತಿಸಲಾಗಿದೆ. ಈ ಘೋರ ಹತ್ಯೆ ಎಸಗಿದ ಆರೋಪಿ ಆತನ ಸ್ವಂತ ಅಣ್ಣ ಸೋಮನಾಥ್ (21) ಎಂಬಾತನಾಗಿದ್ದು, ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಸುರತ್ಕಲ್ ಠಾಣೆಯ ಪೊಲೀಸರು ಆತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ವಿವರಗಳ ಪ್ರಕಾರ, ಈ ಸಹೋದರರಿಬ್ಬರು ತಮ್ಮ ತಾಯಿಯೊಂದಿಗೆ ಚೊಕ್ಕಬೆಟ್ಟು ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗಷ್ಟೇ ಅವರ ತಾಯಿ ಕೆಲಸದ ನಿಮಿತ್ತ ಸ್ವಗ್ರಾಮ ಕೊಪ್ಪಳಕ್ಕೆ ತೆರಳಿದ್ದರು. ಹೀಗಾಗಿ ಘಟನೆ ನಡೆದ ರಾತ್ರಿ ಮನೆಯಲ್ಲಿ ಸಹೋದರರಿಬ್ಬರು ಮಾತ್ರವೇ ಮಲಗಿದ್ದರು. ತಡರಾತ್ರಿ ಯಾರಿಗೂ ತಿಳಿಯದಂತೆ ತಮ್ಮನ ತಲೆಗೆ ಭಾರಿ ಗಾತ್ರದ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದ ಸೋಮನಾಥ್, ಸೋಮವಾರ ಬೆಳಿಗ್ಗೆ ಏನೂ ತಿಳಿಯದವನಂತೆ ನೆರೆಹೊರೆಯವರ ಬಳಿ ತೆರಳಿ “ನನ್ನ ತಮ್ಮ ಮಲಗಿದ್ದಲ್ಲಿಂದ ಏಳುತ್ತಲೇ ಇಲ್ಲ” ಎಂದು ನಾಟಕವಾಡಿದ್ದಾನೆ. ಇದರಿಂದ ಅನುಮಾನಗೊಂಡ ನೆರೆಯವರು ತಕ್ಷಣವೇ ಮನೆ ಮಾಲಕಿ ರೇಖಾ ಅವರಿಗೆ ವಿಷಯ ಮುಟ್ಟಿಸಿದ್ದು, ಅವರು ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರಿಂದ ದೂರು ಸ್ವೀಕರಿಸಿದ ತಕ್ಷಣವೇ ಸುರತ್ಕಲ್ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ, ಮಲ್ಲಿಕಾರ್ಜುನ ರಕ್ತದ ಮಡುವಿನಲ್ಲಿ ತಲೆ ಜಜ್ಜಿದ ಸ್ಥಿತಿಯಲ್ಲಿ ಹೆಣವಾಗಿ ಬಿದ್ದಿರುವುದು ಕಂಡುಬಂದಿದೆ. ಪ್ರಕರಣದ ತೀವ್ರತೆಯನ್ನು ಪರಿಗಣಿಸಿ ಕಾನೂನು ಸುವ್ಯವಸ್ಥೆಯ ಡಿಸಿಪಿ ಮಿಥುನ್ ಎಚ್.ಎಂ., ಪಣಂಬೂರು ಉಪ ವಿಭಾಗದ ಎಸಿಪಿ ಶ್ರೀಕಾಂತ್, ಸುರತ್ಕಲ್ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್, ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ವಿಧಿವಿಜ್ಞಾನ (ಎಫ್ಎಸ್ಎಲ್) ತಂಡ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದಾರೆ. ಸದ್ಯ ಸುರತ್ಕಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸೋಮನಾಥ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










