ಮಂಜೇಶ್ವರ : ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ ಸಮೀಪದ ಜೋಡುಕಲ್ಲು-ಮಡಂದೂರು ದೇರಂಬಳ ಎಂಬಲ್ಲಿ ಅಡಿಕೆ ಮರದಿಂದ ನಿರ್ಮಿಸಲಾಗಿದ್ದ ಅಪಾಯಕಾರಿ ತಾತ್ಕಾಲಿಕ ಸೇತುವೆ ದಾಟುತ್ತಿದ್ದ ವೇಳೆ ಕಾಲೇಜು ವಿದ್ಯಾರ್ಥಿನಿಯೊಬ್ಬರು ಆಯತಪ್ಪಿ ನದಿಗೆ ಬಿದ್ದ ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸ್ಥಳೀಯ ಯುವಕನೊಬ್ಬ ತಕ್ಷಣವೇ ನದಿಗೆ ಧುಮುಕಿ, ಸಾಹಸಮಯವಾಗಿ ವಿದ್ಯಾರ್ಥಿನಿಯನ್ನು ದಡಕ್ಕೆ ಎಳೆದು ತಂದು ಜೀವ ಉಳಿಸಿದ್ದಾರೆ. ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿನಿಯನ್ನು ನಿಶ್ಮಿತಾ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಅವರನ್ನು ಸ್ಥಳೀಯರು ಚಿಕಿತ್ಸೆಯ ಸಲುವಾಗಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ನಿಶ್ಮಿತಾ ಅವರು ತಮ್ಮ ಸಹೋದರಿ ಸುಷ್ಮಿತಾ ಜೊತೆ ಬಸ್ನಿಂದ ಇಳಿದು ಮೀಂಜ ಭಾಗಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಮಾರ್ಗಮಧ್ಯೆ ಹರಿಯುವ ನದಿಗೆ ಅಡ್ಡಲಾಗಿ ಹಾಕಲಾಗಿದ್ದ ಅಡಿಕೆ ಮರದ ಕಾಲುಸಂಕವನ್ನು ಇಬ್ಬರೂ ಪರಸ್ಪರ ಕೈಹಿಡಿದು ಜಾಗರೂಕತೆಯಿಂದ ದಾಟುತ್ತಿದ್ದಾಗ, ನಿಶ್ಮಿತಾ ಅವರ ಕಾಲು ಜಾರಿ ವೇಗವಾಗಿ ಹರಿಯುತ್ತಿದ್ದ ನದಿಯ ನೀರಿಗೆ ಬಿದ್ದಿದ್ದಾರೆ. ಇದನ್ನು ಕಂಡ ದೇರಂಬಳ ನಿವಾಸಿ ಉದಯ ಕುಮಾರ್ ಶೆಟ್ಟಿ ಅವರು ಕ್ಷಣ ಮಾತ್ರವೂ ತಡಮಾಡದೆ, ತಮ್ಮ ಪ್ರಾಣದ ಹಂಗು ತೊರೆದು ಹರಿಯುವ ನೀರಿಗೆ ಧುಮುಕಿದ್ದಾರೆ. ನೀರಿನ ರಭಸದ ನಡುವೆಯೂ ಅತ್ಯಂತ ಸಾಹಸದಿಂದ ಈಜಿ, ಸಂಕಷ್ಟದಲ್ಲಿದ್ದ ನಿಶ್ಮಿತಾ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದು ಅವರ ಜೀವ ರಕ್ಷಿಸಿದ್ದಾರೆ. ಸಮಯೋಚಿತವಾಗಿ ಕಾರ್ಯಪ್ರವೃತ್ತರಾಗಿ ಮಹತ್ತರ ಜೀವ ಉಳಿಸಿದ ಉದಯ ಕುಮಾರ್ ಶೆಟ್ಟಿ ಅವರ ಧೈರ್ಯ ಹಾಗೂ ಮಾನವೀಯತೆಗೆ ಇಡೀ ಗ್ರಾಮಸ್ಥರು ಮತ್ತು ಸಾರ್ವಜನಿಕರು ಮುಕ್ತಕಂಠದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ದೇರಂಬಳದಲ್ಲಿರುವ ಅಡಿಕೆ ಮರದ ತಾತ್ಕಾಲಿಕ ಕಾಲುಸಂಕವು ಎಷ್ಟು ಅಪಾಯಕಾರಿಯಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಪ್ರತಿದಿನ ಮಳೆಗಾಲದ ರಭಸದ ನೀರಿನ ನಡುವೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಹಾಗೂ ಮಹಿಳೆಯರು ಜೀವ ಕೈಯಲ್ಲಿಡಿದುಕೊಂಡೇ ಈ ಕಾಲುಸಂಕವನ್ನು ದಾಟಬೇಕಾದ ದುಸ್ಥಿತಿ ಇದೆ. ಈ ಸೇತುವೆಯ ದುರವಸ್ಥೆಯ ಬಗ್ಗೆ ಮತ್ತು ಇಲ್ಲಿ ಶಾಶ್ವತ ಸೇತುವೆ ನಿರ್ಮಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇನ್ಮುಂದಾದರೂ ಅಪಾಯ ಸಂಭವಿಸಿ ಅಮಾಯಕ ಜೀವಗಳು ಬಲಿಯಾಗುವ ಮುನ್ನವೇ ಸರ್ಕಾರ ಮತ್ತು ಸ್ಥಳೀಯ ಪಂಚಾಯತ್ ಆಡಳಿತ ಎಚ್ಚೆತ್ತುಕೊಂಡು ತಕ್ಷಣವೇ ಕಾಂಕ್ರೀಟ್ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಪ್ರಬಲವಾಗಿ ಆಗ್ರಹಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










