ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಗ್ನಚಿತ್ರಗಳನ್ನು ಬಳಸಿಕೊಂಡು ಕೊಲೆ ಬೆದರಿಕೆಯೊಡ್ಡಿದ್ದ ಆರೋಪಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ. ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (FTSC-2) ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಕುಂಜತ್ತಬೈಲ್ ದೇವಿನಗರ ನಿವಾಸಿ 20 ವರ್ಷದ ಸೋನು ಮ್ಯಾಕ್ಲೀನ್ ನೊರೊನ್ಹಾನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆಯಂತೆ, 2024ರ ಫೆಬ್ರವರಿಯಲ್ಲಿ ಬಾಲಕಿಗೆ ಆಮಿಷವೊಡ್ಡಿ ಪರಿಚಯ ಬೆಳೆಸಿಕೊಂಡಿದ್ದ ಆರೋಪಿ, ಶಕ್ತಿನಗರದ ಚಾಲುಕ್ಯ ಬಾರ್ ಬಳಿಯ ಬಾಡಿಗೆ ಮನೆ ಹಾಗೂ ಅಲಾಪೆ ಗ್ರಾಮದ ಕೆಂಬಾರುವಿನಲ್ಲಿ ಪದೇ ಪದೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದಲ್ಲದೆ ಬಾಲಕಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ವಿಡಿಯೋ ಕಾಲ್ ಮಾಡಿ ಸ್ಕ್ರೀನ್ಶಾಟ್ ತೆಗೆದುಕೊಂಡಿದ್ದ. ಆ ನಗ್ನ ಚಿತ್ರಗಳನ್ನು ಇಟ್ಟುಕೊಂಡು, ತನ್ನ ಇಷ್ಟದಂತೆ ದೈಹಿಕ ಸಂಪರ್ಕಕ್ಕೆ ಬಾರದಿದ್ದರೆ ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದ. ಜತೆಗೆ ಬಾಲಕಿ, ಆಕೆಯ ತಾಯಿ ಹಾಗೂ ಅಕ್ಕನನ್ನು ಕೊಲೆ ಮಾಡುವುದಾಗಿ ಜೀವಬೆದರಿಕೆಯನ್ನೂ ಒಡ್ಡಿದ್ದ.
ಈ ಕುರಿತು ಕಂಕನಾಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್ ಅವರು ಸಮಗ್ರ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕಿ ಸಹನಾ ದೇವಿ ವಾದ ಮಂಡಿಸಿದ್ದರು.
ಸಾಕ್ಷ್ಯಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ಬಿಎನ್ಎಸ್, ಪೋಕ್ಸೊ ಹಾಗೂ ಐಟಿ ಕಾಯ್ದೆಯಡಿ ಶಿಕ್ಷೆ ವಿಧಿಸಿದೆ. ಬಿಎನ್ಎಸ್ ಸೆಕ್ಷನ್ 64(2)(m) ಅಡಿಯಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಲಾಗಿದ್ದು, ಇತರ ಕಾಯ್ದೆಗಳ ಅಡಿಯಲ್ಲಿ ತಲಾ 1 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










