ಉಳ್ಳಾಲ : ಶ್ರೀ ಚೀರುಂಭ ಭಗವತಿ ಕ್ಷೇತ್ರ ಹಾಗೂ ಶ್ರೀ ಚೀರುಂಭ ಭಗವತಿ ತೀಯಾ ಸಮಾಜ ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಬೃಹತ್ ಕೆಸರುಗದ್ದೆ ಕ್ರೀಡೋತ್ಸವ “ತೀಯರೆ ಚೇರ್ಲಿ ಒರುನಾಳ್-2026” ಆಯೋಜಿಸಲಾಗಿದೆ. ಈ ಕ್ರೀಡಾಕೂಟವು ಬರುವ ಆಗಸ್ಟ್ 9ರಂದು ಮಾಡೂರಿನ ಶ್ರೀ ಪಾಡಂಗಾರ ಭಗವತಿ ಕ್ಷೇತ್ರದ ಸನಿಹದಲ್ಲಿರುವ ನೀಲಿಪಾಲು ಗದ್ದೆಯಲ್ಲಿ ಜರುಗಲಿದೆ ಎಂದು ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಹಾಗೂ ಕ್ಷೇತ್ರದ ಆಡಳಿತ ಮೊಕ್ತಸರ ಸುರೇಶ್ ಭಟ್ನಗರ ಪ್ರಕಟಿಸಿದ್ದಾರೆ.
ಶ್ರೀ ಚೀರುಂಭ ಭಗವತೀ ಕ್ಷೇತ್ರದ ಸಭಾಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಈ ಸಮಾಜಮುಖಿ ನಿರ್ಧಾರ ತಳೆಯಲಾಯಿತು. ಈ ಸಭೆಯಲ್ಲಿ ಕ್ಷೇತ್ರದ ಆಡಳಿತ ಮತ್ತು ಸೇವಾ ಸಮಿತಿ ಪದಾಧಿಕಾರಿಗಳು, ಆಚಾರಪಟ್ಟವರು, ಗುರಿಕಾರರು, ಮಹಿಳಾ ಘಟಕ ಹಾಗೂ ತೀಯಾ ಸಮಾಜ ಉಳ್ಳಾಲ ವಲಯದ ಪ್ರಮುಖರು ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕ್ಷೇತ್ರದ ಅಧ್ಯಕ್ಷ ಚಿದಾನಂದ ಗುರಿಕಾರ ನಂದ್ಯ ಅವರು, ಎಲ್ಕೆಜಿ-ಯುಕೆಜಿ ಶಿಶುಗಳಿಂದ ಹಿಡಿದು 10ನೇ ತರಗತಿಯವರೆಗಿನ ಶಾಲಾ ಮಕ್ಕಳಿಗೆ ಅವರ ವಯಸ್ಸಿಗೆ ತಕ್ಕಂತೆ ಬಾಲ್ ಪಾಸಿಂಗ್, ಬಕೆಟ್ ಬಾಲ್, 50, 75 ಹಾಗೂ 100 ಮೀಟರ್ ಓಟ, ಬಲೂನ್ ರೇಸ್, ಬನಾನಾ ರೇಸ್, ಹಿಮ್ಮುಖ ಓಟ, ಅಡಿಕೆ ಹಾಳೆ ಓಟ ಹಾಗೂ ಉಪ್ಪು ಮೂಟೆ ಓಟ ಮುಂತಾದ ವೈವಿಧ್ಯಮಯ ಮತ್ತು ಸಾಂಪ್ರದಾಯಿಕ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದಷ್ಟೇ ಅಲ್ಲದೆ, ಪಿಯುಸಿ ಹಾಗೂ ಪದವಿ ಹಂತದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ 100 ಮೀಟರ್ ಓಟ, ತೆಂಗಿನಕಾಯಿ ಓಟದಂತಹ ಸ್ಪರ್ಧೆಗಳು ನಡೆಯಲಿವೆ. ಹಾಗೆಯೇ, 40 ವರ್ಷ ಮೇಲ್ಪಟ್ಟ ಹಿರಿಯ ಪುರುಷರು ಮತ್ತು ಮಹಿಳೆಯರಿಗೂ ಸಹ ಪ್ರತ್ಯೇಕ ಆಕರ್ಷಕ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಸಭೆಯಲ್ಲಿ ಕೋಶಾಧಿಕಾರಿ ಜಗದೀಶ್, ಉಳ್ಳಾಲ ವಲಯ ತೀಯಾ ಸಮಾಜದ ಅಧ್ಯಕ್ಷ ಜಯಂತ್ ಕೊಂಡಾಣ, ಕ್ಷೇತ್ರ ಸಮಿತಿ ಉಪಾಧ್ಯಕ್ಷ ಎಂ. ದಿನೇಶ್ ಕುಂಪಲ ಸೇರಿದಂತೆ ಸಮಾಜದ ಹಲವು ಪ್ರಮುಖರು ಭಾಗವಹಿಸಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









