ಬೆಳ್ತಂಗಡಿ: ಧರ್ಮಸ್ಥಳ-ಉಜಿರೆ ಮುಖ್ಯ ರಸ್ತೆಯ ನೀರಚಿಲುಮೆ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಸಾರಿಗೆ ಬಸ್ ಮತ್ತು ಬೈಕ್ ನಡುವಿನ ಭೀಕರ ಅಪಘಾತದಲ್ಲಿ 30 ವರ್ಷದ ಯುವಕನೋರ್ವ ದುರಂತ ಅಂತ್ಯ ಕಂಡಿದ್ದು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ. ಮಡಂತ್ಯಾರ್ನ ಪಾರೆಂಕಿ ಪಾಂಗಲ್ ನಿವಾಸಿ ಬಾಬು ಕುಲಾಲ್ ಎಂಬವರ ಪುತ್ರ ಸನತ್ ಸಾವನ್ನಪ್ಪಿದ ಯುವಕನಾಗಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಬಲ್ಲಮಂಜ ನಿವಾಸಿ ಭರತ್ ಬಲವಾದ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಕೆಲಸದ ಸಲುವಾಗಿ ಇಬ್ಬರೂ ಬೈಕ್ನಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಮಂಗಳೂರು ಕಡೆಗೆ ವೇಗವಾಗಿ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಎದುರಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬೈಕ್ನಿಂದ ಎಸೆಯಲ್ಪಟ್ಟ ಸನತ್ ಅವರಿಗೆ ತಲೆಯಿಂದ ವಿಪರೀತ ರಕ್ತಸ್ರಾವವಾಗಿ ಸ್ಥಳದಲ್ಲೇ ಪ್ರಾಣ ಪಕ್ಷಿ ಹಾರಿಹೋಯಿತು. ಗಾಯಾಳು ಭರತ್ನನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ಅವಘಡದಿಂದಾಗಿ ಧರ್ಮಸ್ಥಳ-ಉಜಿರೆ ಸಂಪರ್ಕ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಜಾಮಾಗಿತ್ತು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಬೆಳ್ತಂಗಡಿ ಸಂಚಾರ ಪೊಲೀಸರು ಪರಿಶೀಲನೆ ನಡೆಸಿ, ಅಪಘಾತಕ್ಕೀಡಾದ ವಾಹನಗಳನ್ನು ಪಕ್ಕಕ್ಕೆ ಸರಿಸಿ ಸಂಚಾರ ಸುಗಮಗೊಳಿಸಿದರು. ಈ ಕುರಿತು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









