ಮಂಗಳೂರು : ಖಜಾನೆಯಲ್ಲಿ ತೀವ್ರ ವಿತ್ತೀಯ ಕೊರತೆ ಇದ್ದಾಗ್ಯೂ ಸಚಿವ ಸಂಪುಟ ಸಭೆಯಲ್ಲಿ ಬರೀ ಸುಳ್ಳು ಭರವಸೆಗಳನ್ನು ನೀಡಲಾಗಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು. ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬೀದಿಗಿಳಿದರು. ಪ್ರತಿಭಟನಾಕಾರರು ಖಾಲಿ ಪಾತ್ರೆಗಳನ್ನು ಪ್ರದರ್ಶಿಸುವುದರ ಜೊತೆಗೆ, ಕೈಯಲ್ಲಿ ಚಂಬು ಹಾಗೂ ಕಿವಿಯಲ್ಲಿ ಹೂವು ಇಟ್ಟುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಆಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಾಸಕ ವೇದವ್ಯಾಸ್ ಕಾಮತ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜರುಗಿದ ಸಚಿವ ಸಂಪುಟ ಸಭೆಯು ಕೇವಲ ‘ಉಂಡು ಹೋದ, ಕೊಂಡು ಹೋದ’ ಎಂಬಂತಾಗಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಸರ್ಕಾರ ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರವಲ್ಲ, ಇಡೀ ಕರ್ನಾಟಕ ರಾಜ್ಯದ ಜನತೆಗೆ ಬರಿ ಚಂಬು ನೀಡಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕುಸಿದಿದ್ದರೂ ಜನರನ್ನು ಮರುಳು ಮಾಡಲು ಬಜೆಟ್ ಬೆಂಬಲವಿಲ್ಲದ ಬೃಹತ್ ಯೋಜನೆಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ ಶಾಸಕ ಡಾ. ಭರತ್ ಶೆಟ್ಟಿ, ಪ್ರಸ್ತುತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ರಿಯಲ್ ಎಸ್ಟೇಟ್ ಸರ್ಕಾರವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು. ಆಡಳಿತಾರೂಢರ ಬಲಗೈ ಹಾಗೂ ಎಡಗೈ ನಾಯಕರು ಖಾಸಗಿ ದ್ವೀಪಗಳನ್ನು (ಐಲ್ಯಾಂಡ್) ಖರೀದಿ ಮಾಡುವಲ್ಲಿ ನಿರತರಾಗಿದ್ದಾರೆ. ನಾಚಿಕೆ-ಮಾನ ಮರ್ಯಾದೆ ಬಿಟ್ಟಿರುವ ಈ ನಾಯಕರಿಗೆ ಎಷ್ಟೇ ಬೈದರೂ ಸಂತೋಷವಾಗುತ್ತದೆ ಎಂದು ವಾಗ್ದಾಳಿ ನಡೆಸಿದ ಅವರು, ‘ಅಂಜಲ್ ಮೀನು’ ಸವಿಯಲು ಸಚಿವ ಸಂಪುಟ ಸಭೆಯ ಹೆಸರಿನಲ್ಲಿ 15 ಕೋಟಿ ರೂಪಾಯಿ ಖರ್ಚು ಮಾಡುವ ಅಗತ್ಯವಿತ್ತೇ? ನಿಮಗೇನಾದರೂ ಅಂಜಲ್ ಮೀನು ತ ತಿನ್ನಬೇಕು ಎಂದೆನಿಸಿದರೆ ನಾವೇ ಉಚಿತವಾಗಿ ಕಳುಹಿಸಿಕೊಡುತ್ತಿದ್ದೆವು ಎಂದು ವ್ಯಂಗ್ಯಭರಿತವಾಗಿ ಸವಾಲೆಸೆದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









