ಮಂಗಳೂರು : ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಜನತೆಯನ್ನು ಗುರಿಯಾಗಿಸಿಕೊಂಡು ನಿಷೇಧಿತ ಎಂಡಿಎಂಎ ಮಾದಕದ್ರವ್ಯ ಜಾಲವನ್ನು ಮಂಗಳೂರು ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಭರ್ಜರಿ ಕಾರ್ಯಾಚರಣೆ ನಡೆಸಿದ ಸಿಸಿಬಿ ತಂಡವು ಸುಮಾರು ₹24 ಲಕ್ಷ ಮೌಲ್ಯದ 240 ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದು, ಈ ಮಾರಾಟ ಜಾಲದಲ್ಲಿದ್ದ ಮೂವರು ಆರೋಪಿಗಳನ್ನು ಬಂಧಿಸಿದೆ.
ಉಳ್ಳಾಲ ತಾಲೂಕಿನ ಮುಡಿಪು ನಿವಾಸಿಗಳಾದ ನವಾಜ್ ಅಲಿಯಾಸ್ ನವ್ವಾ (35), ಮೊಹಮ್ಮದ್ ಆರೀಫ್ ಎನ್ (36) ಹಾಗೂ ಲಾಯ್ಡ್ ಡಿಸೊಜಾ (35) ಬಂಧಿತ ವ್ಯಕ್ತಿಗಳಾಗಿದ್ದಾರೆ. ಬೆಂಗಳೂರಿನಿಂದ ಬೃಹತ್ ಪ್ರಮಾಣದಲ್ಲಿ ಎಂಡಿಎಂಎ ತಂದು ಮಂಗಳೂರಿನ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಕುರಿತು ಲಭಿಸಿದ ಖಚಿತ ಮಾಹಿತಿ ಮೇರೆಗೆ ಸೆಪ್ಟೆಂಬರ್ 26ರಂದು ಸಂಜೆ ಮುಡಿಪುವಿನ ಕಾಯರ್ ಗೋಳಿ ಕ್ರಾಸ್ ಬಳಿ ಸಿಸಿಬಿ ಪೊಲೀಸರು ಈ ದಾಳಿ ನಡೆಸಿದ್ದಾರೆ.
ಕಾರ್ಯಾಚರಣೆಯ ವೇಳೆ ಆರೋಪಿಗಳಿಂದ ₹24 ಲಕ್ಷ ಮೌಲ್ಯದ 240 ಗ್ರಾಂ ಎಂಡಿಎಂಎ, 4 ಮೊಬೈಲ್ ಫೋನ್ಗಳು ಮತ್ತು ಮಾದಕವಸ್ತು ಸಾಗಾಟಕ್ಕೆ ಬಳಸುತ್ತಿದ್ದ ಟೆಂಪೋ ವಾಹನ ಸೇರಿದಂತೆ ಒಟ್ಟು ₹29,80,000 ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸುದೀರ್ಘ ತನಿಖೆ ಮುಂದುವರಿದಿದೆ.
ಬಂಧಿತರಲ್ಲಿ ಪ್ರಮುಖ ಆರೋಪಿಯಾದ ನವಾಜ್ ಅಲಿಯಾಸ್ ಮುಡಿಪು ನವಾಜ್ ಹಿನ್ನೆಲೆ ಅಪರಾಧಮಯವಾಗಿದ್ದು, ಈತನ ವಿರುದ್ಧ ಮಂಗಳೂರಿನ ಕೊಣಾಜೆ (12), ಉಳ್ಳಾಲ (2), ಮುಲ್ಕಿ (1) ಹಾಗೂ ಸುರತ್ಕಲ್ (1) ಠಾಣೆಗಳಲ್ಲಿ ಹಲ್ಲೆ, ಕೊಲೆಯತ್ನ, ಅತ್ಯಾಚಾರ, ಅಪಹರಣ, ದನಗಳ್ಳತನ ಮತ್ತು ಡ್ರಗ್ಸ್ ಮಾರಾಟ ಸೇರಿದಂತೆ ಬರೋಬ್ಬರಿ 16 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









