ಮಂಗಳೂರು : ಸಮಾಜಮುಖಿ ಹಾಗೂ ಉತ್ಕೃಷ್ಟ ವೈದ್ಯಕೀಯ ಸೇವೆಗೆ ಹೆಸರುವಾಸಿಯಾದ ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆಯು ಖಾಸಗಿ ಆಸ್ಪತ್ರೆಯಿಂದ ಕೈಬಿಡಲ್ಪಟ್ಟು, ಅತ್ಯಂತ ಸಂದಿಗ್ಧ ಸ್ಥಿತಿಯಲ್ಲಿದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ ಯಶಸ್ವಿ ಚಿಕಿತ್ಸೆ ನೀಡಿ ಜೀವದಾನ ಮಾಡಿದೆ. ಈ ಮೂಲಕ ಸರಕಾರಿ ಆಸ್ಪತ್ರೆಯ ಸೇವಾ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿ, ಆರೋಗ್ಯ ಕ್ಷೇತ್ರದಲ್ಲಿ ಅಪರೂಪದ ಮೈಲಿಗಲ್ಲು ನೆಟ್ಟಿದೆ.
ಉತ್ತರ ಕನ್ನಡ ಜಿಲ್ಲೆಯ 33 ವಾರಗಳ ಗರ್ಭಿಣಿಯೊಬ್ಬರಿಗೆ ಪ್ರಸವಪೂರ್ವ ತೀವ್ರ ರಕ್ತಸ್ರಾವ ಕಾಣಿಸಿಕೊಂಡಿದ್ದರಿಂದ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ನಡೆಸಿದ ಅಲ್ಟ್ರಾಸೌಂಡ್ ತಪಾಸಣೆಯಲ್ಲಿ ಗರ್ಭಕೋಶದ ದಾರಿಗೆ ಮಾಸು (ಪ್ಲಾಸೆಂಟಾ) ಅಡ್ಡವಾಗಿರುವುದು ಕಂಡುಬಂದಿತ್ತು. ಇದು ಪ್ಲಾಸೆಂಟಾ ಅಕ್ರೀಟಾ ಅಥವಾ ಪರ್ಕ್ರೀಟಾದಂತಹ ಅತ್ಯಂತ ಗಂಭೀರ ಸ್ಥಿತಿಯಾಗಿದ್ದು, ಮಾಸುವಿನ ಜೀವಕೋಶಗಳು ಗರ್ಭಾಶಯದ ಸ್ನಾಯುಗಳನ್ನು ದಾಟಿ ಪಕ್ಕದ ಮೂತ್ರಕೋಶಕ್ಕೂ ಹಾನಿ ಉಂಟುಮಾಡುವ ಅಪಾಯವಿತ್ತು. ಇಂತಹ ಸಂಕೀರ್ಣ ಸನ್ನಿವೇಶದಲ್ಲಿ ಸುಮಾರು 3 ರಿಂದ 4 ಲೀಟರ್ ರಕ್ತ ಸ್ರಾವವಾಗಿ ತಾಯಿಯ ಪ್ರಾಣಕ್ಕೇ ಕಂಟಕ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಸ್ಥಿತಿಯ ತೀವ್ರತೆಯನ್ನು ಅರಿತ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರ ಕಲ್ಪನೆಯಂತೆ “ಬಹು-ವೈದ್ಯಕೀಯ ಜೀವರಕ್ಷಕ ಪದ್ಧತಿ”ಯನ್ನು (Multidisciplinary care) ತಕ್ಷಣವೇ ಅನುಷ್ಠಾನಗೊಳಿಸಲಾಯಿತು. ಕೆ.ಎಂ.ಸಿ. ಪ್ರಸೂತಿ ವಿಭಾಗದ ಪ್ರೊ. ಡಾ. ನಿಖಿಲ್ ಶೆಟ್ಟಿ ಅವರ ಮುಖ್ಯ ನೇತೃತ್ವದಲ್ಲಿ, ಸೀನಿಯರ್ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ವೈದ್ಯರ ತಂಡ ಮತ್ತು ಕೆ.ಎಂ.ಸಿ. ಮೂತ್ರರೋಗ ಶಸ್ತ್ರಚಿಕಿತ್ಸಕರು ನಿರಂತರ 4 ಗಂಟೆಗಳ ಕಾಲ ಶ್ರಮಿಸಿ, ಘಾಸಿಗೊಂಡಿದ್ದ ಮೂತ್ರಕೋಶವನ್ನು ಯಶಸ್ವಿಯಾಗಿ ಪುನರ್ನಿರ್ಮಿಸಿದರು. ಅರಿವಳಿಕೆ ತಜ್ಞರು ಮತ್ತು ಶಿಶು ತಜ್ಞರ ಸಮಯೋಚಿತ ನೆರವಿನೊಂದಿಗೆ ಹೆರಿಗೆಯನ್ನು ಪೂರೈಸಿ, ತಾಯಿ ಮತ್ತು ಮಗುವಿನ ಪ್ರಾಣ ಉಳಿಸಲಾಯಿತು. ಈ ಜೀವರಕ್ಷಕ ವಿಧಾನದ ಮೂಲಕ ಹೊಸ ಬದುಕು ಪಡೆದ 10ನೇ ಗರ್ಭಿಣಿ ಮಹಿಳೆ ಇವರಾಗಿದ್ದಾರೆ.
ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಶಸ್ತ್ರಚಿಕಿತ್ಸಾಗಾರ ಹಾಗೂ ತೀವ್ರ ನಿಗಾ ಘಟಕಗಳಿದ್ದು, ‘ಜನನಿ ಶಿಶು ಸುರಕ್ಷಾ ಕಾರ್ಯಕ್ರಮ’ದಡಿ ಗರ್ಭಿಣಿಯರು, ಬಾಣಂತಿಯರು ಮತ್ತು ನವಜಾತ ಶಿಶುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಸರಕಾರಿ ಆರೋಗ್ಯ ಸಂಸ್ಥೆಗಳನ್ನು ನಿರ್ಲಕ್ಷಿಸದೆ, ಬಡವರ ಜೀವ ಕಾಯುವ ಸಂಜೀವಿನಿ ಎಂದು ಗೌರವಿಸಬೇಕೆಂದು ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









